ADVERTISEMENT

ಮೈಮುಲ್‌ನಿಂದ ರಸ ಮೇವು ಘಟಕ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 9:45 IST
Last Updated 6 ಫೆಬ್ರುವರಿ 2011, 9:45 IST

ಮೈಸೂರು: ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೇಂದ್ರ ಆಯೋಜಿತ ಮೇವು ಮತ್ತು ಪಶು ಆಹಾರ ಅಭಿವೃದ್ಧಿ ಯೋಜನೆಯಡಿ ಮೈಮುಲ್‌ನಿಂದ 80 ರಸಮೇವು ಘಟಕ ಸ್ಥಾಪನೆಯಾಗಲಿವೆ.ಹೈನುಗಾರಿಕೆಯಲ್ಲಿ ಹಸಿರು ಮೇವು, ಹಾಲು ಉತ್ಪಾದನೆ, ಗುಣಮಟ್ಟ ಹಾಗೂ ರಾಸುಗಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಮೈಮುಲ್ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ರಸ ಮೇವು ಘಟಕ ಸ್ಥಾಪನೆ ಮಾಡಡಲು ಮುಂದಾಗಿದ್ದು, ಸುಮಾರು 50ಟನ್ ಸಾಮರ್ಥ್ಯದ 80 ರಸಮೇವು ಘಟಕ ಸ್ಥಾಪಿಸಲಿದೆ ಎಂದು ಮೈಮುಲ್ ಕಾರ್ಯನಿರ್ವಾಹಕ ನಿರ್ದೇಶಕ ಟಿ. ಕುಮಾರಸ್ವಾಮಿ ಹಾಗೂ ಸಹಾಯಕ ವ್ಯವಸ್ಥಾಪಕ ಕರಿಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಅಲ್ಲದೇ ಹಸುಗಳು ಮೇವುಗಳ ಮೃದುವಾದ ಭಾಗವನ್ನು ತಿಂದು ಗಡುಸಾದ ಭಾಗವನ್ನು ಹಾಗೆಯೇ ಬಿಡುವುದರಿಂದ ಈ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಮೇವು ತುಂಡರಿಸುವ ಯಂತ್ರಗಳಿಗೆ ಅನುದಾನ ನೀಡುತ್ತಿದೆ. ಮೇವಿನ ಬೆಳೆಗಳಾದ ಹೈಬ್ರಿಡ್ ನೇಪಿಯರ್, ಗಿನಿ, ಮುಸುಕಿನ ಜೋಳ, ಹೈಬ್ರಿಡ್   ಜೋಳ ಹಾಗೂ ಒಣ ಮೇವನ್ನು ಈ ಯಂತ್ರದಿಂದ     ತುಂಡರಿಸಿದಾಗ  ರೈತರಿಗೆ ಆಗುವ ನಷ್ಟ ಕಡಿಮೆಯಾಗುತ್ತದೆ. ಈ  ದೃಷ್ಟಿಯಿಂದ ಮೈಮುಲ್ ಶೇ.75ರ ಅನುದಾನದಲ್ಲಿ ಹಾಲು  ಉತ್ಪಾದಕ ರೈತರಿಗೆ ಖರೀದಿಸಲು ಮುಂದಾಗಿದೆ          ಎನ್ನುತ್ತಾರೆ.

ಕೇಂದ್ರ ಸರ್ಕಾರದ ಮೇವು ಮತ್ತು ಪಶು ಆಹಾರ ಯೋಜನೆಯಡಿ 505 ಮೇವು ತುಂಡರಿಸುವ ಯಂತ್ರಗಳಿಗೆ  ಅನುದಾನ ಕೋರಿ ಕೇಂದ್ರ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಗೆ ಮೈಮುಲ್ ಪ್ರಸ್ತಾವನೆ ಸಲ್ಲಿಸಿದ್ದು, ಶೇ.100ರ ಅನುದಾನದಲ್ಲಿ ರಸಮೇವು ತಯಾರಿಕಾ ಘಟಕ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಈ ಎರಡು ಯೋಜನೆಗಳಿಗೆ ಒಟ್ಟು 159.25ಲಕ್ಷ ರೂಪಾಯಿ ಮಂಜೂರಾಗಿದೆ ಎಂದರು.

ವಿಶೇಷ ಪಶು ಆಹಾರಕ್ಕೆ ಶೇ.50 ಅನುದಾನ ಪಶುಗಳಲ್ಲಿ ಹಾಲು ಉತ್ಪಾದನೆ ಹಾಗೂ ಸಂತಾನೋತ್ಪತ್ತಿ ಕ್ರಿಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೈಮುಲ್ ರೈತರಿ ಗೆ ಶೇ.50ರ ಅನುದಾನದಲ್ಲಿ ವಿಶೇಷ ಪಶು ಆಹಾರ (ಬೈಪಾಸ್ ಪ್ರೋಟಿನ್) ನೀಡುತ್ತಿದ್ದು, ಮಾದರಿ-1, ಬೈಪಾಸ್  ಪ್ರೊಟೀನ್ ಹಾಗೂ ಯೂರಿಯಾ-ಕಾಕಂಬಿ ಖನಿಜಗಳಿಂದ ತಯಾರಾದ ‘ನಂದಿನಿ ನೆಕ್ಕು ಬಿಲ್ಲೆ’ ಮುಖ್ಯವಾದವು.

ಮಾದರಿ-1 ಆಹಾರದಲ್ಲಿ ಶೇ.20ರಷ್ಟು ಕಚ್ಚಾ ಪ್ರೋಟಿನ್ ಹಾಗೂ ಪಚನಕ್ರಿಯೆಗೆ ಸಹಾಯವಾಗುವ ಶೇ.68ರಷ್ಟು ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ. ಇದನ್ನು ಕೊಡುವುದರಿಂದ ಮಾಮೂಲಿಗಿಂತ 500ಗ್ರಾಂ ಹಾಲು ಹೆಚ್ಚು ಉತ್ಪಾದನೆಯಾಗುತ್ತದೆ.ಬೈಪಾಸ್ ಪ್ರೋಟಿನ್ ಆಹಾರದಲ್ಲಿ ಶೇ.25ರಷ್ಟು ಕಚ್ಚಾ ಸಸಾರಜನಕ, ಶೇ.7.25ರಷ್ಟು ಮೇದಸ್ಸು ಇರುತ್ತದೆ. ಶೇ.15ರಷ್ಟು ಪ್ರಮಾಣ ಪಚನ ಕ್ರಿಯೆಗೆ ಒಳಗಾಗದೆ ನೇರವಾಗಿ ರಕ್ತಕ್ಕೆ ಸೇರುವ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ.

ಖನಿಜ ಮಿಶ್ರಣ ಆಹಾರದಲ್ಲಿ ಪ್ರಾಣಿಗಳ ದೇಹದ ಎಲುಬುಗಳ ಹಾಗೂ ಬೇರೆ ಅಂಗಾಂಶಕಗಳ ರಚನೆಯಲ್ಲಿ ಮುಖ್ಯ ಪಾತ್ರ ವಹಿಸುದ್ದು, ಶರೀರದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಲ್ಲಿ ಆಹಾರಾಂಶಗಳ ಬಳಕೆ, ಆರೋಗ್ಯ ರಕ್ಷಣೆ ಹಾಗೂ ಉತ್ಪಾದನೆ ಹಾಗೂ ಸಂತಾನೋತ್ಪತ್ತಿ ಕ್ರಿಯೆಗೆ ಸಹಾಯವಾಗುತ್ತದೆ.ಇದು ಒಂದು ಕೆ.ಜಿ.ಗೆ 30 ರೂಪಾಯಿಗೆ ಖರೀದಿಸಿ ರೈತರಿಗೆ ರೈತರಿಗೆ 19.50 ರೂಪಾಯಿಗೆ ನೀಡುತ್ತದೆ. ಇದು ಪ್ರತಿ ತಿಂಗಳು 10ರಿಂದ 11ಟನ್ ಆಹಾರವನ್ನು ರೈತರು ಖರೀದಿಸುತ್ತಿದ್ದಾರೆ. 

 ಯೂರಿಯಾ- ಕಾಕಂಬಿ ಖನಿಜ ಮಿಶ್ರಣ, ಉಪ್ಪು ಹಾಗೂ ಅಕ್ಕಿ ತೌಡಿನಿಂದ ತಯಾರಿಸಿದ ‘ನಂದಿನಿ ನೆಕ್ಕು ಬಿಲ್ಲೆ’  ರಾಸುಗಳಲ್ಲಿ ಮೇವುಗಳ ಪಚನಕ್ರಿಯೆಗೆ ಅನುಕೂಲವಾಗುತ್ತದೆ.ನಂದಿನಿ ನೆಕ್ಕು ಬಿಲ್ಲೆಯಲ್ಲಿ ಸುಲಭವಾಗಿ ಕರಗುವ ಸಸಾರಜನಕ, ಶಕ್ತಿವರ್ಧಕ ಖನಿಜಾಂಶಗಳು ರಾಸುಗಳ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸಿಗುವುದರ ಜೊತೆಗೆ ಸೂಕ್ಷ್ಮಾಣುಗಳ ಸಂಖ್ಯೆಯನ್ನು ವೃದ್ಧಿಯಾಗುತ್ತದೆ. ಒಣ ಹುಲ್ಲು ಸಮರ್ಪಕವಾಗಿ ಜೀರ್ಣವಾಗುತ್ತದೆ. ಒಂದು ಕೆ.ಜಿ. ಬಿಲ್ಲೆ 33 ರೂಪಾಯಿ. ಮೈಮುಲ್ ಇದನ್ನು 16.50 ರೂಪಾಯಿಗೆ ನೀಡುತ್ತದೆ.  ಪ್ರತಿ ತಿಂಗಳು 1ರಿಂದ 1.500 ಬಿಲ್ಲೆಗಳು ಖರೀದಿಸಿದ್ದಾರೆ. ಮಾಹಿತಿಗೆ 0821-2473645, 2470414 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.