ADVERTISEMENT

ಯೋಗದಿಂದ ವಿಶ್ವಶಾಂತಿ: ಶ್ರೀ ಶ್ರೀ ರವಿಶಂಕರ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 9:39 IST
Last Updated 5 ಅಕ್ಟೋಬರ್ 2017, 9:39 IST

ಮೈಸೂರು: ಯೋಗ ಮಾಡುವವರು ಸಮಾಜವನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಆದ್ದರಿಂದ ಎಲ್ಲರೂ ಯೋಗ ಕಲಿತರೆ ವಿಶ್ವದಲ್ಲಿ ಶಾಂತಿ ನೆಲೆಸಲಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು.

ಎಸ್‌ಎಂಪಿ ಫೌಂಡೇಷನ್, ಶ್ವಾಸ ಸಂಸ್ಥೆ ಹಾಗೂ ಯೋಗಿಕ್ ಹೆರಿಟೇಜ್‌ ವತಿಯಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಯೋಗ ಪರಂಪರೋತ್ಸವದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಯೋಗ ಮಾಡಿದ ವ್ಯಕ್ತಿ ನೆಮ್ಮದಿ ಕಂಡುಕೊಳ್ಳುತ್ತಾನೆ. ಯೋಗ ಸಂಸ್ಕೃತಿಯನ್ನು ಹೊಂದಿರುವ ಭಾರತ ಇಂದು ಗುರುವಿನ ಸ್ಥಾನದಲ್ಲಿ ನಿಂತಿದೆ. ಯೋಗವನ್ನು ಎಲ್ಲೆಡೆ ಪಸರಿಸಿ ವಿಶ್ವ ಶಾಂತಿಗೆ ನಾಂದಿ ಹಾಡಿದೆ ಎಂದು ಹೇಳಿದರು.

ADVERTISEMENT

ವಿದ್ಯಾವಂತ ಯುವಜನರೂ ಇಂದು ದಾರಿ ತಪ್ಪುತ್ತಿದ್ದಾರೆ. ಶಿಕ್ಷಣದಲ್ಲಿ ಯೋಗವನ್ನು ಸೇರಿಸಿದರೆ ಇದನ್ನು ತಪ್ಪಿಸಬಹುದು. ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಯೋಗ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕಿದೆ ಎಂದರು.

ಹರಿದ್ವಾರದ ಗಾಯತ್ರಿ ಪರಿವಾರದ ಡಾ.ಪ್ರಣವ್ ಪಾಂಡ್ಯ, ದಶಕಗಳಿಂದ ಆಹಾರ ತ್ಯಜಿಸಿ ಕೇವಲ ಗಾಳಿಯ ಸೇವನೆಯಿಂದ ಬದುಕಿರುವ ಅರ್ಜೆಂಟೀನಾದ ವಿಕ್ಟರ್ ಟ್ರುವಿಯೊನೊ ಮತ್ತು ಪ್ರಾಣಾಯಾಮದ ಮೂಲಕ ಪ್ರಸಿದ್ಧಿ ಪಡೆದಿರುವ ಫ್ರಾನ್ಸ್ ದೇಶದ ಕೂಡೊ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಚನಾನಂದ ಸ್ವಾಮೀಜಿ, ಎಸ್‌ಎಂಪಿ ಫೌಂಡೇಷನ್ ಸಂಸ್ಥಾಪಕ ಎಸ್.ಎಂ. ಶಿವಪ್ರಕಾಶ್, ಯೋಗಿಕ್ ಹೆರಿಟೇಜ್‌ನ ಗಂಗೇಶ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.