ADVERTISEMENT

ರಂಗಾಯಣ ಮುಚ್ಚಲು ಪಿತೂರಿ: ಜನ್ನಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 8:37 IST
Last Updated 3 ಜೂನ್ 2013, 8:37 IST

ಮೈಸೂರು: `ಮೈಸೂರಿನ ರಂಗಾಯಣ ಘಟಕವನ್ನು ಮುಚ್ಚುವ ಪಿತೂರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲೇ ಇಲ್ಲಿನ ಕಲಾವಿದರನ್ನು ಶಿವಮೊಗ್ಗ ಹಾಗೂ ಧಾರವಾಡ ರಂಗಾಯಣಗಳಿಗೆ ವರ್ಗಾಯಿಸಲಾಗಿದೆ. ಈ ಅನ್ಯಾಯ ಸರಿಪಡಿಸಬೇಕು' ಎಂದು ರಂಗಕರ್ಮಿ ಜನಾರ್ದನ (ಜನ್ನಿ) ಒತ್ತಾಯಿಸಿದರು.

ನಗರದ ರಂಗಾಯಣದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ರಂಗಭೂಮಿ ಮುನ್ನೋಟ (ರಂಗಾಯಣ ಹಿನ್ನೆಲೆ) ವಿಚಾರ ಸಂಕಿರಣ ಉದ್ಘಾಟನೆ ಬಳಿಕ ಅವರು ಮಾತನಾಡಿದರು. `ಶಿವಮೊಗ್ಗ ಹಾಗೂ ಧಾರವಾಡ ರಂಗಾಯಣ ಘಟಕಗಳಿಗೆ ಆಯಾ ಪ್ರಾದೇಶಿಕ ಪ್ರತಿಭೆಗಳನ್ನು ಬಳಸಿ ಕೊಳ್ಳಲಿ. ಆದರೆ, ಮೈಸೂರಿನ ರಂಗಾಯಣ ಒಡೆಯುವ ಅಗತ್ಯವಿಲ್ಲ. ಇದಕ್ಕಾಗಿ ವರ್ಗಾವಣೆಗೊಂಡ ಕಲಾವಿದರ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕಾಗಿದೆ' ಎಂದರು.

ರಂಗಕರ್ಮಿ ಎಚ್.ಆರ್. ರಮೇಶ್ ಮಾತನಾಡಿ, `ರಂಗಭೂಮಿ ಅನೇಕ ಸವಾಲು ಎದುರಿಸುತ್ತ, ಉತ್ತರಗಳನ್ನು ಹುಡುಕುತ್ತ ರಾಜಕೀಯ ಹಾಗೂ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವಲ್ಲಿ ಸಾಧನವಾಗಿ ಬೆಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ರಂಗಭೂಮಿ ಸ್ಪಂದಿಸುತ್ತಿದೆಯೇ?' ಎಂದು ಪ್ರಶ್ನಿಸಿದರು.

ನಂತರ `ರಂಗಾಯಣ- ಹೊಸ ಅಸ್ತಿತ್ವ ಹುಡುಕಾಟ', `ರಂಗಾಯಣ- ಮಾನವ ಸಂಪನ್ಮೂಲ ಬಳಕೆಯ ಹೊಣೆಗಾರಿಕೆ' ಹಾಗೂ `ಭವಿಷ್ಯದ ಪರಿಕಲ್ಪನೆಯಲ್ಲಿ ರಂಗಾಯಣ' ಕುರಿತ ಗೋಷ್ಠಿಗಳು ನಡೆದವು. ರಂಗಕರ್ಮಿ ಹಾಗೂ ರಂಗತಜ್ಞರಾದ ನ.ರತ್ನ, ಚಿದಂಬರ ರಾವ್ ಜಂಬೆ, ಶ್ರೀಪಾದ ಭಟ್, ಶ್ರೀನಿವಾಸ ಕಪ್ಪಣ್ಣ, ಶಶಿಧರ ಭಾರಿಘಾಟ್, ಪ್ರಕಾಶ್ ಬೆಳವಾಡಿ, ಪ್ರಕಾಶ್ ಗರುಡ, ನಟರಾಜ್ ಹೊನ್ನವಳ್ಳಿ, ಸತೀಶ್ ಸಾಸ್ವೆಹಳ್ಳಿ, ಕಿಕ್ಕೇರಿ ನಾರಾಯಣ, ರಾಮದಾಸ್ ಅಡ್ಯಂತಾಯ, ಪಿ. ಗಂಗಾಧರಸ್ವಾಮಿ, ಶಂಕ್ರಯ್ಯ ಘಂಟಿ, ಪ್ರಸಾದ್ ರಕ್ಷಿದಿ, ಕೆ.ಆರ್. ಸುಮತಿ, ಜೆ. ಲೋಕೇಶ್, ಎಚ್.ಎಸ್. ಉಮೇಶ್, ಜಯರಾಮ್ ಪಾಟೀಲ, ಕೆ. ಮುದ್ದುಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.