ADVERTISEMENT

ರಂಗು ಕಳೆದುಕೊಂಡ ವರುಣಾ‌

ಕ್ಷೇತ್ರದಲ್ಲಿ ಗೊಂದಲ; ಬಸವರಾಜು, ಅಭಿಷೇಕ್‌ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 12:24 IST
Last Updated 25 ಏಪ್ರಿಲ್ 2018, 12:24 IST
ಟಿ.ಬಸವರಾಜು
ಟಿ.ಬಸವರಾಜು   

ಮೈಸೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಸ್ಪರ್ಧೆ ಸಾಧ್ಯತೆಯಿಂದ ಕುತೂಹಲಕ್ಕೆ ಕಾರಣವಾಗಿದ್ದ ವರುಣಾ ಕ್ಷೇತ್ರ ಒಮ್ಮೆಲೇ ರಂಗು ಕಳೆದುಕೊಂಡಿದೆ.

ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂಬ ಸುದ್ದಿ ಖಚಿತವಾಗುತ್ತಿದ್ದಂತೆ ಹಲವು ಬೆಳವಣಿಗೆಗಳು ನಡೆದಿದ್ದು, ಕ್ಷೇತ್ರವು ಗೊಂದಲದ ಗೂಡಾಗಿದೆ.

ಬೆಂಗಳೂರು–ನೀಲಗಿರಿ ರಸ್ತೆಯ ಲ್ಲಿರುವ ಪ್ರೆಸಿಡೆಂಟ್‌ ಹೋಟೆಲಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ರಾಜಕೀಯ ಚಟುವಟಿಕೆಗಳು ನಡೆದರೆ, ಹೊರಗಡೆ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು.

ADVERTISEMENT

ಸೋಮವಾರ ರಾತ್ರಿಯೇ ಇಲ್ಲಿಗೆ ಬಂದಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ಹಾಗೂ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಜೊತೆ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಮಾಲೋಚನೆ ನಡೆಸಿದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪಕ್ಷದ ಅಭ್ಯರ್ಥಿಗಳ ಜೊತೆಯೂ ಚರ್ಚಿಸಿದರು. ವಿಜಯೇಂದ್ರಗೆ ಟಿಕೆಟ್‌ ನೀಡದಿರುವುದಕ್ಕೆ ಕೆಲವರು ಸ್ಪರ್ಧೆ ಯಿಂದ ಹಿಂದೆ ಸರಿಯುವ ಬೆದರಿಕೆ ಯೊಡ್ಡಿದ್ದರು.

ಒಳಗೆ ಸಭೆ ನಡೆಯುತ್ತಿದ್ದರೆ ಹೊರಗೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದರು. ರಸ್ತೆ ತಡೆ ನಡೆಸಿ ಘೋಷಣೆ ಕೂಗಿದರು. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಅವರನ್ನು ಅಲ್ಲಿಂದ ಚದುರಿಸಲು ಪ್ರಯತ್ನಿಸಿದರು. ಬಳಿಕ ಕಾರ್ಯಕರ್ತರು ಪಕ್ಷದ ಕಚೇರಿಗೆ ತೆರಳಿ ಕಲ್ಲು ತೂರಾಟ ನಡೆಸಿದರು.

ತಪ್ಪು ಗ್ರಹಿಕೆ ಬೇಡ: ‘ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿ ಗೆಲುವಿಗೆ ವಿಜಯೇಂದ್ರ ಶ್ರಮಿಸುತ್ತಾನೆ. ಗೊಂದಲಗಳು ಬಗೆಹರಿದಿವೆ. ಕಾರ್ಯರ್ತರು ಹಾಗೂ ಜನರು ತಪ್ಪುಗ್ರಹಿಕೆ ಮಾಡಿಕೊಳ್ಳಬಾರದು. ಕೇಂದ್ರದ ನಿರ್ಧಾರವನ್ನು ಒಪ್ಪಿಕೊಂಡು ಸಹಕರಿಸಬೇಕೆಂದು ಕೋರುತ್ತೇನೆ’ ಎಂದು ಯಡಿಯೂರಪ್ಪ ತಿಳಿಸಿದರು.

ನಾಮಪತ್ರ: ಬಿಜೆಪಿ ಕಾರ್ಯಕರ್ತರ ವಿರೋಧದ ನಡುವೆಯೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ತೋಟದಪ್ಪ ಬಸವರಾಜು ಅವರು ನಾಮಪತ್ರ ಸಲ್ಲಿಸಿದರು. ಅವರ ಜೊತೆ ಸ್ಥಳೀಯ ನಾಯಕರು ಮಾತ್ರ ಇದ್ದರು.

ತಿ.ನರಸೀಪುರ ಪಟ್ಟಣದ ಬಸವರಾಜು ಅವರು ಹೋಟೆಲ್‌ ವ್ಯವಹಾರ ನಡೆಸುತ್ತಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಗುರುತಿಸಿ ಕೊಂಡಿರುವ ಅವರು, ತಿ.ನರಸೀಪುರ ಎಬಿವಿಪಿ ಅಧ್ಯಕ್ಷರೂ ಆಗಿದ್ದವರು. ಪತ್ನಿ ನಾಗರತ್ನಮ್ಮ ಅವರು ಗರ್ಗೇಶ್ವರಿಯಲ್ಲಿ ಶಾಲಾ ಶಿಕ್ಷಕಿ.

‘ಸಾಮಾನ್ಯ ಕಾರ್ಯಕರ್ತನಾಗಿ 37 ವರ್ಷಗಳಿಂದಲೂ ಬಿಜೆಪಿಗಾಗಿ ದುಡಿದಿದ್ದೇನೆ. ಹಲವರ ಗೆಲುವಿಗೆ ಶ್ರಮಿಸಿದ್ದೇನೆ. ಆರ್‌ಎಸ್‌ಎಸ್‌, ಎಬಿವಿಪಿ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಸಾಲಿನಲ್ಲಿ ಮೊದಲಿಗನಾಗಿದ್ದೆ’ ಎಂದು 56 ವರ್ಷ ವಯಸ್ಸಿನ ಬಸವರಾಜು ಪ್ರತಿಕ್ರಿಯಿಸಿದರು.

ಇತ್ತ ಜೆಡಿಎಸ್‌ ಪಕ್ಷದಲ್ಲೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪಕ್ಷದ ಅಭ್ಯರ್ಥಿಯನ್ನು ಬದಲಾಯಿಸುವುದಾಗಿ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆಯೆ ಇದಕ್ಕೆ ಕಾರಣ. ಆದರೆ, ಹಿಂದೆ ಘೋಷಿಸಿದ್ದ ಅಭಿಷೇಕ್‌ ಅವರೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯಲು ಕೆಲವೇ ನಿಮಿಷಗಳಿದ್ದಾಗ ಉಮೇದುವಾರಿಕೆ ಸಲ್ಲಿಸಿದರು.

ಕಾಂಗ್ರೆಸ್‌ ಸೇರಿದ ಬಿಜೆಪಿ ಕಾರ್ಯಕರ್ತರು

ಮೈಸೂರು: ವಿಜಯೇಂದ್ರ ಅವರಿಗೆ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ವರುಣಾ ಕ್ಷೇತ್ರದ ಬಿಜೆಪಿಯ ಕೆಲ ಕಾರ್ಯಕರ್ತರು ಕಾಂಗ್ರೆಸ್‌ ಸೇರಿದರು.

ನಗರದ ಹೋಟೆಲಿನಲ್ಲಿ ಮಂಗಳವಾರ ನಡೆದ ವರುಣಾ ಕ್ಷೇತ್ರದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಅವರನ್ನು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಯತೀಂದ್ರ ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ಅವರು ಮಳೆಯ ನಡುವೆಯೂ ವರುಣಾ ಕ್ಷೇತ್ರದ ಕಸಬಾ ಹೋಬಳಿಯ ಎಡದೊರೆ ಗ್ರಾಮದಲ್ಲಿ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.