ಮೈಸೂರು: ಮಾಜಿ ಸಚಿವ ಎಸ್.ಎ. ರಾಮದಾಸ್ ಅವರಿಗೆ ಮತ್ತೊಂದು ಕಂಠಕ ಎದುರಾಗಿದೆ. ನಿವೇಶನ ಕೊಡುವ ನೆಪದಲ್ಲಿ ನೂರಾರು ಎಕರೆ ಭೂಮಿಯನ್ನು ಖರೀದಿಸಿ ಮುಗ್ದ ಜನರನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಹಾನಗರಪಾಲಿಕೆ ಸದಸ್ಯೆಯೊಬ್ಬರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿ, ತನಿಖೆ ನಡೆಸುವಂತೆ ಒತ್ತಾಯಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಾರ್ಡ್ ಸಂಖ್ಯೆ 11ರ ಸದಸ್ಯೆ ಎಸ್. ಉಮಾಮಣಿ ಮತ್ತು ಹರೀಶ್ ಎಂಬುವರು ರಾಮದಾಸ್ ಮತ್ತು ಅವರ ಸಹೋದರ ಶ್ರೀಕಾಂತ್ ದಾಸ್ ಅವರ ವಿರುದ್ಧ ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ ಅವರಿಗೆ ಕಳೆದ ಜನವರಿ ತಿಂಗಳಲ್ಲಿ ದೂರು ಸಲ್ಲಿಸಿದ್ದಾರೆ.
‘ಇಎಸ್‌ಎಸ್ ಅಂಡ್ ಇಸ್‌ಎಸ್‌ಎಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕರಾದ ಶ್ರೀಕಾಂತ್ ದಾಸ್ ಮತ್ತು ಮಾಜಿ ಸಚಿವ ರಾಮದಾಸ್ ಅವರು ನಿವೇಶನ ಕೊಡುವ ನೆಪದಲ್ಲಿ ಮೈಸೂರು ಸುತ್ತಮುತ್ತ ನೂರಾರು ಎಕರೆ ಭೂಮಿಯನ್ನು ಖರೀದಿಸಿ, ಮುಗ್ಧ ಜನರನ್ನು ವಂಚಿಸಿದ್ದಾರೆ.
ಕಳೆದ 7 ವರ್ಷಗಳಲ್ಲಿ ಸುಮಾರು ರೂ 24 ಸಾವಿರ ಕೋಟಿ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರು ನೀಡಿರುವುದಾಗಿ ಉಮಾಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ ಅವರು ಉಮಾಮಣಿ ಅವರು ನೀಡಿದ ದೂರನ್ನು ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ವರ್ಗಾಯಿಸಿದ್ದಾರೆ. ಶಿಖಾ ಅವರು ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸುವಂತೆ ಸಂಬಂಧಪಟ್ಟ ಎಂಟು ಇಲಾಖೆಗಳಿಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.