ADVERTISEMENT

ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 6:35 IST
Last Updated 5 ಜನವರಿ 2012, 6:35 IST

ಸರಗೂರು: ತಾಲ್ಲೂಕಿನ ರೈತರು ಹತ್ತಿ ಬಿತ್ತನೆ ಬೀಜಕ್ಕಾಗಿ ಹರಸಾಹಸ ಪಡುತ್ತಿದ್ದಾರೆ, ಕಂಪೆನಿ ಯವರ ಬೇಜವಬ್ದಾರಿಯಿಂದ ರೈತರು ತೊಂದರೆ ಅನುಭವಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಹೇಳಿದರು.

ಸರಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಹ್ಯಾಂಡ್‌ಪೋಸ್ಟ್‌ನಲ್ಲಿ ಮಂಗಳವಾರ ಉಪ ಮಾರುಕಟ್ಟೆಯ ಗುದ್ದಲಿ ಪೂಜೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಈ ಭಾಗದ ರೈತರು ಮಳೆ ಅವಲಂಭಿಸಿದ್ದಾರೆ. ಹತ್ತಿ. ಹೊಗೆ ಸೊಪ್ಪು, ಕಬ್ಬು, ಶುಂಠಿ ಬೆಳೆಯುವ ರೈತರ ನೆರವಿಗೆ ಸರ್ಕಾರ ಬರಬೇಕು ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ರೈತರ ಪರ ನಿಲ್ಲಬೇಕು. ಅವರಿಂದ ಹೆಚ್ಚಿನ ಆದಾಯ ಬರುತ್ತದೆ. ಅದಕ್ಕೆ ಪೂರಕವಾಗಿ ರೈತರುಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡ ಬೇಕು ಎಂದರು.

ಶಾಸಕ ಚಿಕ್ಕಣ್ಣ ಮಾತನಾಡಿ, ಹ್ಯಾಂಡ್‌ಪೋಸ್ಟ್ ಸರ್ಕಲ್‌ನಲ್ಲಿ ತರಕಾರಿ ಹಾಗೂ ಜಾನುವಾರು ವ್ಯಾಪಾರ ನಡೆಯುತ್ತಿದೆ. ಮುಂದೆ ತಾತ್ಕಾಲಿಕವಾಗಿ ತರಕಾರಿ ಹಾಗೂ ಜಾನುವಾರ ವ್ಯಾಪಾರವನ್ನು ನಡೆಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಪ್ರಾಂಗಣದಲ್ಲಿ ತೂಕದಯಂತ್ರ, ತರಕಾರಿ ಮಾರುಕಟ್ಟೆ ಇನ್ನಿತರ ಅನುಕೂಲ ಕಲ್ಪಿಸಲಾಗುತ್ತದೆ ಎಂದರು.

ಸರಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಹ್ಯಾಂಡ್‌ಪೋಸ್ಟ್‌ನಲ್ಲಿ ರೂ. 98 ಲಕ್ಷ ವೆಚ್ಚದಲ್ಲಿ ಉಪ ಮಾರುಕಟ್ಟೆ ನಿರ್ಮಿಸಲು. ಮಾನಂದ ವಾಡಿ ರಸ್ತೆಯಿಂದ ಮಾರುಕಟ್ಟೆ ಪ್ರಾಂಗಣದ ವರಗೆ ಡಾಂಬರು ರಸ್ತೆ, ಚರಂಡಿ, ಶೌಚಾಲಯ, ಹರಾಜು ಕಟ್ಟೆ, ಕಾಂಪೌಡ್ ನಿರ್ಮಾಣಕ್ಕೆ ಶಾಸಕ ಚಿಕ್ಕಣ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ನಂದಿನಿ ಚಂದ್ರಶೇಖರ್, ಚಿಕ್ಕಣ್ಣೇಗೌಡ, ಡಿ. ಸುಂದರದಾಸ್, ಎಂ.ಡಿ. ಮಂಚಯ್ಯ ಮಾತನಾಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ಮಹದೇವ್, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯಲಕ್ಷ್ಮಿ ನಿಂಗರಾಜು, ಮಾಜಿ ಸದಸ್ಯ ಕೆ. ಚಿಕ್ಕವೀರನಾಯಕ, ಹೈರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ, ಚಾಮರಾಜನಗರ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಕೆ. ಶ್ರೀನಿವಾಸರೆಡ್ಡಿ, ಮೈಸೂರು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಮಹಲಿಂಗು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.