ADVERTISEMENT

ರೈತ, ಪತ್ರಿಕಾ ಛಾಯಾಗ್ರಾಹಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 9:39 IST
Last Updated 9 ಜನವರಿ 2014, 9:39 IST

ಮೈಸೂರು: ರಸ್ತೆಯಲ್ಲಿ ಹುರುಳಿ ಚೆಲ್ಲುತ್ತಿದ್ದ ರೈತ ಮತ್ತು ಪತ್ರಿಕಾ ಛಾಯಾಗ್ರಾಹಕನ ಮೇಲೆ ಕೆಎಸ್‌ಆರ್‌ ಟಿಸಿ ಚಾಲಕ ಹಲ್ಲೆ ನಡೆಸಿರುವ ಘಟನೆ ಮೈಸೂರು ತಾಲ್ಲೂಕಿನ ಹೊಸಕೋಟೆ ಬಳಿ ಬುಧವಾರ ನಡೆದಿದೆ.

ಬಿಳಗಲಿ–ಸುತ್ತೂರು ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್‌ ಸುತ್ತೂರಿ­ನಿಂದ ಮೈಸೂರಿಗೆ ಮಧ್ಯಾಹ್ನ 1.15ರ ಸುಮಾರಿನಲ್ಲಿ ಹೊಸಕೋಟೆ ಬಳಿ ಹೋಗುವಾಗ ರೈತನೊಬ್ಬ ರಸ್ತೆಯಲ್ಲಿ ಹುರುಳಿ ಸುರಿಯುತ್ತಿದ್ದ. ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದ ಚಾಲಕ, ರೈತನನ್ನು ಗಾಬರಿಗೊಳಿಸಿ, ಆತನ ಮೇಲೆ ಹರಿಸುವಂತೆ ನಟಿಸಿದ. ಇದ­ರಿಂದ ರೈತ ಗಾಬರಿಗೊಂಡು ರಸ್ತೆ ಬದಿಗೆ ಬಂದು ನಿಂತ.

ಬಸ್‌ನಿಂದ ಕೆಳಗೆ ಇಳಿದ ಚಾಲಕ ರೈತನನ್ನು ಹಿಗ್ಗಾಮುಗ್ಗಾ ಥಳಿಸಿದ. ಇದೇ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಪತ್ರಿಕಾ ಛಾಯಾಗ್ರಾಹಕ ಸುತ್ತೂರು ನಂಜುಂಡ ನಾಯಕ ಅವರು ಹಲ್ಲೆ ನಡೆಸುತ್ತಿದ್ದ ದೃಶ್ಯವನ್ನು ಸೆರೆ­ಹಿಡಿದರು. ಇದರಿಂದ ಕುಪಿತ­ಗೊಂಡ ಚಾಲಕ ನಂಜುಂಡ ನಾಯಕ ಅವರ ವಿರುದ್ಧ ತಿರುಗಿಬಿದ್ದು, ಅವರ ಮೇಲೂ ಹಲ್ಲೆ ಮಾಡಿ, ಕ್ಯಾಮೆರಾವನ್ನು ಹಾನಿಗೊಳಿಸಿದ.

‘ದೂರವಾಣಿ ಕರೆ ಮಾಡಿದ ಚಾಲಕ ಪತ್ರಿಕಾ ಛಾಯಾಗ್ರಾಹಕನೊಬ್ಬ ತನ್ನ ಫೋಟೊ ತೆಗೆದಿದ್ದು, ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು. ಎಲ್ಲರೂ ಯರಗನಹಳ್ಳಿ ಬಸ್ ನಿಲ್ದಾಣದ ಬಳಿ ಬನ್ನಿ ಎಂದು ಕರೆ ನೀಡಿದ. ಇದರಿಂದ ಭಯಭೀತನಾದ ನಾನು ಚಿಕ್ಕಹಳ್ಳಿ ಬಸ್‌ ನಿಲ್ದಾಣದ ಬಳಿಯೇ ಇಳಿದು ನೇರವಾಗಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ತೆರಳಿ ದೂರು ನೀಡಿದ್ದೇನೆ’ ಎಂದು ಸುತ್ತೂರು ನಂಜುಂಡನಾಯಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.