ADVERTISEMENT

ರೈತ ಸಂಘ, ತೋಟಗಾರಿಕೆ ಟ್ರೈನಿ, ಜೆಡಿಎಸ್ ಧರಣಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 10:15 IST
Last Updated 23 ಸೆಪ್ಟೆಂಬರ್ 2011, 10:15 IST

ಮೈಸೂರು: ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿ ಮಸೂದೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ರೈತರಿಗೆ ಪುನರ್ವಸತಿ, ಪರಿಹಾರ, ಭಿಕ್ಷಾ ಪರಿಹಾರ ಉಪಾಯಗಳನ್ನು ಒದಗಿಸಿ ರೈತರ ಭೂಮಿಯನ್ನು ಕಬಳಿಸುವ ನೀತಿಯುಳ್ಳ ಭೂ ಸ್ವಾಧೀನ ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಅನುಮೋದನೆಗಾಗಿ ಮಂಡಿಸಿದೆ. ವಿದೇಶಿ ಕಂಪೆನಿಗಳು, ಕಾರ್ಪೊರೇಟ್ ಶಕ್ತಿಗಳು ಮೇಲುಗೈ ಸಾಧಿಸಿ ಮುಂದೊಂದು ದಿನ ಸಂವಿಧಾನಕ್ಕೆ ಬೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ.

ಶಕ್ತಿಯುತ ಜನ ಲೋಕಪಾಲ್ ಮಸೂದೆಯನ್ನು ಕೂಡಲೇ ಜಾರಿಗೆ ತರುವಂತೆ ಮತ್ತು ಚುನಾವಣಾ ನೀತಿ ಸುಧಾರಣೆ ಆಗಬೇಕಿದೆ. ನಮ್ಮ ಭೂಮಿ, ನೈಸರ್ಗಿಕ ಸಂಪತ್ತು ರಕ್ಷಣೆಗಾಗಿ ಪಣ ತೊಡಬೇಕಾಗಿದೆ. ದೇಶದ ಸಾರ್ವಭೌಮತ್ವ ಉಳಿಸಿಕೊಳ್ಳಲು ಜನರಲ್ಲಿ ಜಾಗೃತಿ ಉಂಟುಮಾಡಬೇಕಿದೆ ಎಂದು ಧರಣಿನಿರತರು ಒತ್ತಾಯಿಸಿದರು.

ರೈತ ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಬಡಗಲಪುರ ನಾಗೇಂದ್ರ, ಕೆ.ಎಂ.ಪುಟ್ಟಸ್ವಾಮಿ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

ತೋಟಗಾರಿಕೆ ತರಬೇತುದಾರರು
ರಾಜ್ಯದ ಸರ್ಕಾರಿ ಪ್ರೌಢಶಾಲೆ ಮತ್ತು ಅನದಾನಿತ ಶಾಲೆಗಳಲ್ಲಿ ಖಾಲಿ ಇರುವ ತೋಟಗಾರಿಕೆ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ರಾಜ್ಯ ಮಟ್ಟದ ತೋಟಗಾರಿಕೆ ತರಬೇತಿದಾರರ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಸರ್ಕಾರದಿಂದ ಹೊಸದಾಗಿ ಪ್ರಾರಂಭವಾಗಿರುವ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ತೋಟಗಾರಿಕೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ತೋಟಗಾರಿಕೆ (ಕ್ರಾಪ್ಟ್) ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವಂತೆ ಅಧಿಸೂಚನೆ ಹೊರಡಿಸಬೇಕು.

ಸರ್ಕಾರಿ ಹಾಗೂ ಖಾಸಗಿ ಬಿ.ಇಡಿ ಕಾಲೇಜುಗಳಲ್ಲಿ ಹೊಸದಾಗಿ ತೋಟಗಾರಿಕೆ ವೃತ್ತಿ ಶಿಕ್ಷಣ ಹುದ್ದೆ ಸೃಷ್ಟಿಸಿ ನೇಮಕಾತಿ ಮಾಡಿಕೊಳ್ಳಬೇಕು. ತೋಟಗಾರಿಕೆ ಇಲಾಖೆಯಿಂದ ತರಬೇತಿ ಪಡೆದಿರುವ ನಿರುದ್ಯೋಗಿಗಳ ವಯೋಮಿತಿ ಮೀರುತ್ತಿದೆ. ತಕ್ಷಣ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕು. ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಗಾರ್ಡನರ್ ಹುದ್ದೆ, ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಸಹಾಯಕರ ಹುದ್ದೆಗೆ ತೋಟಗಾರಿಕೆ ತರಬೇತಿ ಪಡೆದವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಮೂಗನಹುಂಡಿ ಯೋಗೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಜೆಡಿಎಸ್ ಪ್ರತಿಭಟನೆ
ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಬಡವರ ಬಂಧು ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಕಾರ್ಯಕರ್ತರು ಗಾಂಧಿಚೌಕದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರಿಗೆ ಈಗಾಗಲೇ ತತ್ತರಿಸಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ದರ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಕಾರು ಚಾಲಕರು, ಮಾಲೀಕರು, ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಪದೆ ಪದೇ ಪೆಟ್ರೋಲ್ ದರ ಏರಿಕೆ ಮಾಡುವುದನ್ನು ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಶರಾವತಿ ವೆಂಕಟೇಶ್, ನಗರ ಘಟಕ ಅಧ್ಯಕ್ಷ ಪೈಲ್ವಾನ್ ಶ್ರೀನಿವಾಸ್, ಶಿವಮೂರ್ತಿ,       ಕೆ.ಆರ್.ಮಿಲ್ ಶಿವಣ್ಣ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.