ADVERTISEMENT

ರೋಗಿಗಳ ಮೇಲೆ ಇರಲಿ ಸಿಂಪತಿ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 6:25 IST
Last Updated 5 ಜನವರಿ 2012, 6:25 IST

ಮೈಸೂರು: `ಅಲೋಪತಿ, ನ್ಯಾಚುರೋಪತಿ, ಹೋಮಿ ಯೋಪತಿಗಿಂತ ರೋಗಿಗಳ ಮೇಲೆ ಸಿಂಪತಿ ಬಹಳ ಮುಖ್ಯ~ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಹೆಬ್ಬಾಳು ಕೈಗಾರಿಕಾ ಪ್ರದೇಶದ ಆಶಾಕಿರಣ ಚಾರಿಟಬಲ್ ಟ್ರಸ್ಟ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭಗವಾನ್ ಮಹಾವೀರ ಜೈನ್ ತರಬೇತಿ ಕೇಂದ್ರ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ (ಆಪರೇಷನ್ ಥಿಯೇಟರ್)ಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಅನ್ಯರ ಕಷ್ಟ ಪರಿಹರಿಸಲು ಯತ್ನಿಸಿದರೆ ಅದು ತಪಸ್ಸು. ನಮ್ಮ ಕಷ್ಟ ಪರಿಹರಿಸಿಕೊಳ್ಳಲು ಯತ್ನಿಸಿದರೆ ಅದು `ತಾಪ~ವಾಗುತ್ತದೆ. ಆದ್ದರಿಂದ ಅನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ವೈದ್ಯಕೀಯ ವೃತ್ತಿಯಲ್ಲಿ ಈಚೆಗೆ ಶೋಷಣೆ ಹೆಚ್ಚಾಗಿ ನಡೆಯುತ್ತಿದೆ. ಯಮ ಪ್ರಾಣವನ್ನು ಮಾತ್ರ ಕಿತ್ತುಕೊಳ್ಳುತ್ತಾನೆ. ಆದರೆ, ವೈದ್ಯರು ಪ್ರಾಣದೊಂದಿಗೆ ಹಣವನ್ನೂ ಕಿತ್ತುಕೊಳ್ಳುತ್ತಿದ್ದಾರೆ ಎಂದು ಜನ ಮಾತನಾಡುವಂತಾಗಿದೆ~ ಎಂದು ಹಾಸ್ಯ ಉಕ್ಕಿಸಿದರು.

`ಎಚ್‌ಐವಿ ರೋಗಿಗಳನ್ನು ಸಮಾಜ ಅಸ್ಪೃಶ್ಯರ ಹಾಗೆ ಕಾಣುತ್ತಿರುವುದು ಸರಿಯಲ್ಲ. ಅವರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು. ಅಲೋಪತಿ, ನ್ಯಾಚುರೋಪತಿ ವಿಧಾನದಿಂದ ಚಿಕಿತ್ಸೆ ನೀಡುವ ಮುನ್ನ, ಎಚ್‌ಐವಿ ಪೀಡಿತರ ಮೇಲೆ ಸಿಂಪತಿ ಬೆಳೆಸಿಕೊಳ್ಳಬೇಕು. ಸರಸ್ವತಿಪುರಂನ ಕೃಷ್ಣಧಾಮದಲ್ಲಿ ನಡೆಯುತ್ತಿರುವ ಋಕ್ ಸಂಹಿತಾ ಯಾಗದಲ್ಲಿ ಪಾಲ್ಗೊಳ್ಳಲು ತಾವು ಬಂದಿದ್ದು, ಆ ಯಾಗಕ್ಕಿಂತ ಆಶಾ ಕಿರಣ ಆಸ್ಪತ್ರೆ ಮಾಡುತ್ತಿರುವ ಸೇವೆ ದೊಡ್ಡದಾಗಿದೆ~ ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಮಾತನಾಡಿ, `ಆಶಾಕಿರಣ ಆಸ್ಪತ್ರೆ ಮನು ಕುಲಕ್ಕೆ ಮಾದರಿ ಕೆಲಸ ಮಾಡುತ್ತಿದೆ. ಆ ಮೂಲಕ ಸಮಾಜದ ಋಣ ತೀರಿಸುತ್ತಿದೆ. ನನ್ನಿಂದ ಈ ಆಸ್ಪತ್ರೆಗೆ ಯಾವುದೇ ಸಹಾಯವಾಗಿಲ್ಲ. ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿಯಾಗಿ ಬರದೆ, ಸಾಮಾನ್ಯ ವ್ಯಕ್ತಿಯಾಗಿ ಬಂದು ಸಹಾಯ ಮಾಡುತ್ತೇನೆ~ ಎಂದು ಭರವಸೆ ನೀಡಿದರು.

ಹೇಮಚಂದ್ರ ಜೈನ್, ಆಸ್ಪತ್ರೆ ಮುಖ್ಯಸ್ಥ ಡಾ.ಎಸ್.ಎನ್.ಮೋತಿ ಹಾಜರಿದ್ದರು. ಡಾ.ಆರ್.ಮಹೇಶ್‌ಕುಮಾರ್ ಸ್ವಾಗತಿಸಿದರು. ಕೆ.ಎಸ್.ಗುರುರಾಜ್ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.