ADVERTISEMENT

ವಾಣಿಜ್ಯ ಕಟ್ಟಡಗಳಲ್ಲಿ ಉಚಿತ ಪಾರ್ಕಿಂಗ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 5:19 IST
Last Updated 28 ನವೆಂಬರ್ 2017, 5:19 IST

ಮೈಸೂರು: ಪಾಲಿಕೆ ವ್ಯಾಪ್ತಿಯ ಎಲ್ಲ ವಾಣಿಜ್ಯ ಮಳಿಗೆಗಳ ನೆಲಮಾಳಿಗೆ (ಸೆಲ್ಲರ್)ಗಳಲ್ಲಿ ವಾಹನ ನಿಲುಗಡೆಗೆ ಉಚಿತ ಅವಕಾಶ ಕಲ್ಪಿಸುವ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಗ್ರಾಹಕರಿಂದ ಶುಲ್ಕ ವಸೂಲು ಮಾಡಿದರೆ ಅಂತಹ ವಾಣಿಜ್ಯ ಮಳಿಗೆಗಳ ಪರವಾನಗಿಯನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ.

ಈ ಕುರಿತು ಪಟ್ಟಣ ಯೋಜನೆ ಮತ್ತು ಸುಧಾರಣೆಗಳ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್‌ ಪ್ರೀತಂ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆದರೆ, ಕೆಲವಡೆ ವಾಹನ ನಿಲುಗಡೆಗೆ ಅವಕಾಶವಿಲ್ಲದೆ ಇದ್ದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ವಾಹನ ಸಂಚಾರಕ್ಕೂ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆಯು ಈ ಹಿಂದಿನ ಕೌನ್ಸಿಲ್‌ ಸಭೆಯಲ್ಲಿ ಎಲ್ಲ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ನೆಲಮಾಳಿಗೆಯಲ್ಲಿ ಸೌಲಭ್ಯ ಕಲ್ಪಿಸಬೇಕು ಎಂದು ತೀರ್ಮಾನಿಸಿತ್ತು ಎಂದು ಉಲ್ಲೇಖಿಸಿದರು.

ರಿಲಯನ್ಸ್‌ಗೆ ಗಡುವು: ನಗರದ ರಿಲಯಲ್ಸ್‌ ಕಂಪೆನಿಯು ಬಾಕಿ ಉಳಿಸಿಕೊಂಡಿರುವ ₹ 76 ಕೋಟಿ ಕಂದಾಯವನ್ನು 1 ವಾರದೊಳಗೆ ಪಾವತಿಸದೆ ಇದ್ದಲ್ಲಿ ದೂರಸಂಪರ್ಕ ಕೇಬಲ್‌ಗಳನ್ನು ಕಡಿತಗೊಳಿಸುವುದಾಗಿ ಸಭೆಯಲ್ಲಿ ತಿಳಿಸಲಾಯಿತು. ಸದಸ್ಯೆ ಸಮೀನಾ ಜಬೀನ್‌, ತಸ್ಲೀಂ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.