ADVERTISEMENT

ವಿದ್ಯುತ್‌ ಬೇಲಿ ತುಳಿದು ತಂದೆ–ಮಗ ಸಾವು

ಕಪಿಲಾ ನದಿಯಲ್ಲಿ ಶವಗಳು ಪತ್ತೆ; ಜಮೀನಿನ ಮಾಲೀಕರು ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 5:04 IST
Last Updated 11 ಜೂನ್ 2018, 5:04 IST

ಎಚ್.ಡಿ.ಕೋಟೆ: ಕಾಡು ಹಂದಿಗಳಿಂದ ಬೆಳೆ ರಕ್ಷಿಸಲು ಹೊಲಕ್ಕೆ ಹಾಕಿದ್ದ ವಿದ್ಯುತ್‌ ಬೇಲಿ ತುಳಿದು ಅಪ್ಪ-ಮಗ ಮೃತಪಟ್ಟ ಘಟನೆ ಕೂಸೇ ಗೌಡನ ಹುಂಡಿಯಲ್ಲಿ ನಡೆದಿದ್ದು, ಭಯಗೊಂಡ ಜಮೀನಿನ ಮಾಲೀಕರು ಶವಗಳನ್ನು ಕಪಿಲಾ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.

ತಾಲ್ಲೂಕಿನ ಆನಗಟ್ಟಿ ಹಾಡಿಯ ಆದಿವಾಸಿಗಳಾದ ಮಾದ (45) ಪ್ರವೀಣ್‌ (19) ಸಾವನ್ನಪ್ಪಿದವರು.

ಘಟನೆ ವಿವರ: ಆನಗಟ್ಟಿ ಹಾಡಿಯ ಮಾದ, ಪ್ರವೀಣ್ ಹಾಗೂ ಮರಿಯಪ್ಪ ಶುಕ್ರವಾರ ಕೂಸೇ ಗೌಡನ ಹುಂಡಿಯ ಸಮೀಪ ರೈತರ ಜಮೀನುಗಳಲ್ಲಿ ಜೇನುತುಪ್ಪ ಕಿತ್ತುಕೊಂಡು ಬರುತ್ತಿದ್ದಾಗ ಮರಗೆಣಸು ಹೊಲದ ಬೇಲಿ ದಾಟಿದ್ದಾರೆ. ಮೊದಲು ಹೋದ ಮಾದ ಮತ್ತು ಪ್ರವೀಣ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಜೊತೆಯಲ್ಲಿದ್ದ ಮರಿಯಪ್ಪ ಹೆದರಿ ಪರಾರಿಯಾಗಿದ್ದಾರೆ.

ADVERTISEMENT

ಶನಿವಾರ ಹಾಡಿಯ ಮುಖಂಡರು ಮರಿಯಪ್ಪನೊಂದಿಗೆ ಜಮೀನಿನ ಮಾಲೀಕ ಮರಿಗೌಡರ ಬಳಿ ವಿಚಾರಿಸಿದಾಗ ‘ಇಲ್ಲಿ ಏನೂ ನಡೆದಿಲ್ಲ, ಯಾರೂ ಸತ್ತಿಲ್ಲ’ ಎಂದು ಉತ್ತರಿಸಿದ್ದಾರೆ.

ಭಾನುವಾರ ಬೆಳಿಗ್ಗೆ ತಾಲ್ಲೂಕಿನ ತುಂಬಸೋಗೆ ಗ್ರಾಮದ ಬಳಿಯ ಕಪಿಲಾ ನದಿಯಲ್ಲಿ ಮಾದ ಮತ್ತು ಪ್ರವೀಣನ ಮೃತದೇಹಗಳು ಪತ್ತೆಯಾಗಿವೆ.

‘ಇವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ನಂತರ ಚೀಲದೊಳಗೆ ಹಾಕಿಕೊಂಡು ತಂದು ನದಿಗೆ ಬಿಸಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮರಿಯಪ್ಪ ನೀಡಿದ ದೂರಿನ ಮೇಲೆ ಎಸ್ಐ ಅಶೋಕ್ ಮತ್ತು ಸಿಪಿಐ ಹರೀಶ್ ಅವರು ಜಮೀನಿನ ಮಾಲೀಕರಾದ ಮರೀಗೌಡ ಮತ್ತು ನಿಜಲಿಂಗಪ್ಪ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಗಿರಿಜನ ಮುಖಂಡರಾದ ವಿಜಯ್ ಕುಮಾರ್, ಶಿವರಾಜ್, ಸ್ವಾಮಿ, ರಾಜಣ್ಣ, ಬಸವಯ್ಯ, ಪುಟ್ಟಯ್ಯ, ಪುಟ್ಟಬಸವ, ದೇವರಾಜು ಡಿವೈಎಸ್‌ಪಿ ಬಳಿ ಮನವಿ ಮಾಡಿದ್ದಾರೆ. ಸಮಾಜ ಕಲ್ಯಾಣ ಅಧಿಕಾರಿಯಾದ ಚಂದ್ರಪ್ಪ, ರಮೇಶ್ ಸ್ಥಳಕ್ಕೆ ಭೇಟಿ ನೀಡಿ, ಮೃತ ಕುಟುಂಬಗಳಿಗೆ ಸಹಾಯಧನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.