ADVERTISEMENT

ಶರ್ಮರ ಸೇವೆ ಅವಿಸ್ಮರಣೀಯ: ಮಹಾದೇವಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 9:25 IST
Last Updated 4 ಜನವರಿ 2011, 9:25 IST

ತಿ.ನರಸೀಪುರ: ತಾಲ್ಲೂಕಿನ ಗ್ರಾಮೀಣ ಜನರಿಗೆ ಶೈಕ್ಷಣಿಕ ಸೇವೆಯನ್ನು ನೀಡಿದ ದಿ.ಎಂ.ಸಿ.ಶಿವಾನಂದ ಶರ್ಮ  ಅವರ ಅವಿಸ್ಮರಣೀಯ ಎಂದು ಗ್ರಾಮ ವಿದ್ಯೋದಯ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹಾದೇವ ಸ್ವಾಮಿ ಅಭಿಪ್ರಾಯಪಟ್ಟರು. ಪಟ್ಟಣದ ವಿದ್ಯೋದಯ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ವಿದ್ಯೋದಯ ಶಿಕ್ಷಣ ಸಂಸ್ಥೆಗಳ  ಸಂಸ್ಥಾಪಕ ದಿ.ಎಂ.ಸಿ.ಶಿವಾನಂದ ಶರ್ಮ ಅವರ 42ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರ್ಮಾಜೀ ಅವರು ತಾಲ್ಲೂಕು ಕೇಂದ್ರದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳಿಲ್ಲದ ವೇಳೆಯಲ್ಲಿ ಹಳ್ಳಿ ಹಳ್ಳಿಗೆ ತಿರುಗಿ  ಶಿಕ್ಷಣ ಸಂಸ್ಥೆ ಕಟ್ಟಿ ನೂರಾರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಮೊದಲ ಎಂಜಿನಿಯರಿಂಗ್ ಕಾಲೇಜು (ಬೆಂಗಳೂರಿನ  ರಾಷ್ಟ್ರೀಯ ವಿದ್ಯಾಲಯ) ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ದೂರ ದೃಷ್ಟಿಯಿಂದ ಇಂದು ಪಟ್ಟಣದಲ್ಲಿ  ಹಲವಾರು ವಿದ್ಯೋದಯ ಶಿಕ್ಷಣ ಸಂಸ್ಥೆಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ ಎಂದು  ಹೇಳಿದರು.

ಅವರ ಆಶಯಗಳನ್ನು ಜಾರಿ–ಗೊಳಿಸುವ ನಿಟ್ಟಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಲಾಗುತ್ತಿದ್ದೆ. ಈ ಸಂಸ್ಥೆಯ ಮೂಲಕ  ಸಾಮಾಜಿಕ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಜ.22 ಕ್ಕೆ ಅವರು ಜನಿಸಿ 100 ವ ರ್ಷಗಳಾದ ಕಾರಣ ಜ. 22 ರಂದು ಶತಮಾನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ. ವಸ್ತುಪ್ರದರ್ಶನ,  ಚರ್ಚಾಸ್ಪರ್ಧೆ, ವಿಜ್ಞಾನ ಮೇಳ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ನಿರ್ದೇಶಕ ಕೆ.ಎಸ್.ಶಿವಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮ ವಿದ್ಯೋದಯ ಸಂಘದ ಕ್ಯಾಲೆಂಡರ್ ಅನ್ನು ಕಾರ್ಯದರ್ಶಿ ಮಹಾದೇವಸ್ವಾಮಿ ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳಿಂದ ಭಜನೆ ಹಮ್ಮಿಕೊಳ್ಳಲಾಗಿತ್ತು.

ಸಂಘದ ಅಧ್ಯಕ್ಷೆ ನಾಗರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಜಯಶೇಖರಸ್ವಾಮಿ, ಆರ್.ಶಂಕ ರೇಗೌಡ, ಖಜಾಂಚಿ ಡಿ.ಸೋಮಣ್ಣ, ನಿರ್ದೇಶಕ ಸಾಂಬಮೂರ್ತಿ, ಆಡಳಿತ ಸಹಾಯಕ ಶಿವನಂಜಪ್ಪ, ಪ್ರಥಮ  ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್.ಗೋಪಾಲ್, ಬಾಲಕಿಯರ ಪಿಯು ಕಾಲೇಜು ಪ್ರಾಂಶುಪಾಲ  ಮೂಗೂರು ಕುಮಾರಸ್ವಾಮಿ, ಉಪ ಪ್ರಾಂಶುಪಾಲ ವೈ.ಕೃಷ್ಣೋಜಿರಾವ್, ಪ್ರೊ.ವೀರಭದ್ರಯ್ಯ, ಬಿ.ಸಿ.ಇಂದಿರಮ್ಮ,  ವಿ.ಮಹಾದೇವಸ್ವಾಮಿ, ಪ್ರೊ ರುದ್ರಸ್ವಾಮಿ, ಪ್ರೊ. ರಾಮಚಂದ್ರ ಸೇರಿದಂತೆ ವಿದ್ಯೋದಯ ಶಿಕ್ಷಣ ಸಂಸ್ಥೆಗಳ ಎಲ್ಲಾ  ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.