ADVERTISEMENT

ಶಾಲಾ ಪ್ರವೇಶಾತಿ; ವಯೋಮಿತಿ ಗೊಂದಲ

ಒಂದನೇ ತರಗತಿ ಪ್ರವೇಶಾತಿಗೆ 5 ವರ್ಷ 5 ತಿಂಗಳಿಗೆ ಇಳಿಸಿ ಆದೇಶ

​ಪ್ರಜಾವಾಣಿ ವಾರ್ತೆ
Published 29 ಮೇ 2018, 11:23 IST
Last Updated 29 ಮೇ 2018, 11:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಒಂದನೇ ತರಗತಿ ಪ್ರವೇಶಾತಿಗೆ ಮಕ್ಕಳ ವಯೋಮಿತಿಯನ್ನು ಏಕಾಏಕಿ 5 ವರ್ಷ 5 ತಿಂಗಳಿಗೆ ಇಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಪೋಷಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.‌

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 1ನೇ ತರಗತಿಗೆ ಪ್ರವೇಶಾತಿ ಪಡೆಯುತ್ತಿರುವ ಮಕ್ಕಳ ವಯೋಮಿತಿಯನ್ನು ಈ ಹಿಂದೆ 5 ವರ್ಷ 10 ತಿಂಗಳು ನಿಗದಿಪಡಿಸಲಾಗಿತ್ತು. ಆ ವಯೋಮಿತಿಯ ಪ್ರಕಾರವೇ ಮಕ್ಕಳು ಅರ್ಜಿ ಸಲ್ಲಿಸಿದ್ದು, ಈಗಾಗಲೇ ಎರಡು ಸುತ್ತುಗಳ ಆರ್‌ಟಿಇ ಪ್ರಕ್ರಿಯೆ ಮುಗಿದಿದೆ.

ಆದರೆ, ಹೊಸ ಆದೇಶ ಶಾಲಾ ಪ್ರಾರಂಭದ ಹಂತದಲ್ಲಿ ಬಂದಿದ್ದು 5 ವರ್ಷ 5 ತಿಂಗಳು ತುಂಬಿರುವ ಮಕ್ಕಳು ಶೈಕ್ಷಣಿಕ ಸಾಲಿನಲ್ಲಿ ಆರ್‌ಟಿಇ ಪ್ರವೇಶಾತಿಯಿಂದ ವಂಚಿತರಾದಂತಾಗಿದೆ.

ADVERTISEMENT

ಮೇ 23ರಂದು ಹೊಸದಾಗಿ ಆದೇಶ ಹೊರಡಿಸಿದ್ದು, 2018–19ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ 1ನೇ ತರಗತಿಗೆ ಸೇರುವ ಮಗುವಿನ ವಯೋಮಿತಿಯನ್ನು 5 ವರ್ಷ, 5 ತಿಂಗಳಿಗೆ ಇಳಿಕೆ ಮಾಡಲಾಗಿದೆ.

‘ಆರ್‌ಟಿಇ ಅಡಿ ಪ್ರವೇಶಾತಿ ಪಡೆಯುವ ಮಕ್ಕಳಿಗೆ ಈಗಾಗಲೇ 5 ವರ್ಷ 10 ತಿಂಗಳು ನಿಗದಿಪಡಿಸಲಾಗಿದೆ. ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಮಕ್ಕಳ ವಯೋಮಿತಿ ಸಡಿಲಗೊಳಿಸುವಂತೆ ಕೆಲ ಖಾಸಗಿ ಶಾಲೆಗಳು ಮನವಿ ಮಾಡಿರುವುದರಿಂದ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಈ ಆದೇಶವು ಆರ್‌ಟಿಇ ಪ್ರವೇಶಕ್ಕೆ ಮುಂದಿನ ಸಾಲಿನಿಂದ ಅನ್ವಯವಾಗಲಿದೆ’ ಎಂದು ಇಲಾಖೆಯ ಆರ್‌ಟಿಇ ಶಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಲ್ಲದೆ, ಹೊಸದಾಗಿ ಹೊರಡಿಸಿರುವ ಆದೇಶದ ಕುರಿತೂ ಕೆಲ ಶಾಲೆಗಳಿಗೆ ಮಾಹಿತಿ ಇಲ್ಲ.  ಹೀಗಾಗಿ, 5 ವರ್ಷ 10 ತಿಂಗಳು ತುಂಬದ ಮಕ್ಕಳನ್ನು ಶಾಲೆಗಳಿಗೆ ಸೇರಿಸಿಕೊಳ್ಳದೆ ವಾಪಸ್ ಕಳುಹಿಸಿರುವ ಪ್ರಕರಣಗಳು ನಡೆದಿವೆ. ಸರ್ಕಾರದ ಆದೇಶ ತೋರಿಸುವಂತೆ ಕೆಲ ಶಾಲೆಗಳು ತಾಕೀತು ಮಾಡುತ್ತಿವೆ ಎಂದು ಪೋಷಕರು ದೂರಿದ್ದಾರೆ.

‘ವಯೋಮಿತಿ ಪರಿಷ್ಕರಿಸಿ ಸರ್ಕಾರದ ಹೊರಡಿಸಿರುವ ಆದೇಶ ಕುರಿತು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನೋಟಿಸ್‌ ಫಲಕದಲ್ಲಿ ಹಾಕುವಂತೆಯೂ ಸೂಚನೆ ನೀಡಲಾಗಿದೆ. ಮತ್ತೊಮ್ಮೆ ಶಾಲೆಗಳ ಗಮನಕ್ಕೆ ತರಲಾಗುವುದು’ ಎಂದು ಡಿಡಿಪಿಐ ಮಮತಾ ತಿಳಿಸಿದರು.

ಈ ಆದೇಶ ಈ ವರ್ಷಕ್ಕೆ ಮಾತ್ರ ಸೀಮಿತವಾಗಿದೆಯೇ ಅಥವಾ ಮುಂದಿನ ಶೈಕ್ಷಣಿಕ ಸಾಲಿನಲ್ಲೂ ಮುಂದುವರಿಯಲಿದೆಯೇ ಎಂಬ ಗೊಂದಲ ಕೆಲ ಪೋಷಕರಲ್ಲಿದೆ. ಆದರೆ, ಸರ್ಕಾರಿ ಆದೇಶ ಈ ಶೈಕ್ಷಣಿಕ ಸಾಲಿನಿಂದ ಎಂದಿದ್ದು, ಮುಂದಿನ ಸಾಲಿನಲ್ಲೂ ಜಾರಿಯಲ್ಲಿ ಇರಲಿದೆ.

ಕೆಲ ಪೋಷಕರು 1ನೇ ತರಗತಿ ಪ್ರವೇಶಾತಿ ವಯೋಮಿತಿ ನೋಡಿಕೊಂಡು ತಮ್ಮ ಮಕ್ಕಳನ್ನು ಎಲ್‌ಕೆಜಿಗೆ ಸೇರಿಸುತ್ತಿದ್ದಾರೆ. ಆದರೆ, ಎಲ್‌ಕೆಜಿ ಪ್ರವೇಶಾತಿಗೆ ಎಷ್ಟು ವಯಸ್ಸಿರಬೇಕು ಎಂಬ ಗೊಂದಲ ನೆಲೆಸಿದೆ.

ಒಂದನೇ ತರಗತಿಗೆ 5 ವರ್ಷ 5 ತಿಂಗಳಾದರೆ ಎಲ್‌ಕೆಜಿ ಪ್ರವೇಶಾತಿಗೆ 3 ವರ್ಷ 5 ತಿಂಗಳು ಸಾಕು ಎಂಬುದು ಪೋಷಕರ ವಾದ. ಅದಕ್ಕೆ ಶಾಲೆಗಳು ಅವಕಾಶ ನೀಡುತ್ತಿಲ್ಲ.

ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಇದ್ದಂತೆ 3 ವರ್ಷ 10 ತಿಂಗಳು ಆಗಿರಬೇಕು ಎಂದು ಮುಖ್ಯ ಶಿಕ್ಷಕರು ಪೋಷಕರಿಗೆ ಹೇಳಿ ಕಳಿಸುತ್ತಿದ್ದಾರೆ. ಎಲ್‌ಕೆಜಿಗೆ ಸೇರುವ ವಯೋಮಿತಿ ಕುರಿತು ಹೊಸ ಆದೇಶದಲ್ಲಿ ಯಾವುದೇ ಮಾಹಿತಿ ಇಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳೂ ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.