ADVERTISEMENT

ಶಾಲೆಯಿಂದ ಹೊರಗುಳಿದ 314 ಮಕ್ಕಳು

ಕಾರ್ಮಿಕರ ವಲಸೆಯೇ ಕಾರಣ– ಸರ್ವಶಿಕ್ಷಣ ಅಭಿಯಾನ ಸಮೀಕ್ಷೆಯಲ್ಲಿ ಬಹಿರಂಗ

ಕೆ.ಓಂಕಾರ ಮೂರ್ತಿ
Published 27 ಮೇ 2018, 10:07 IST
Last Updated 27 ಮೇ 2018, 10:07 IST
ಶಾಲೆಯಿಂದ ಹೊರಗುಳಿದ 314 ಮಕ್ಕಳು
ಶಾಲೆಯಿಂದ ಹೊರಗುಳಿದ 314 ಮಕ್ಕಳು   

ಮೈಸೂರು: ಜಿಲ್ಲೆಯಲ್ಲಿ 6ರಿಂದ 13 ವರ್ಷ ವಯಸ್ಸಿನ ಸುಮಾರು 314 ಮಕ್ಕಳು 2018–19ನೇ ಶೈಕ್ಷಣಿಕ ಸಾಲಿ ನಲ್ಲಿ ಶಾಲೆಯಿಂದ ಹೊರಗುಳಿದಿದ್ದಾರೆ.

ಸರ್ವಶಿಕ್ಷಣ ಅಭಿಯಾನ ವತಿಯಿಂದ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಕಳೆದ ಶೈಕ್ಷಣಿಕ ಸಾಲಿಗಿಂತ ಈ ಬಾರಿ ಹೆಚ್ಚಿನ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಸುಮಾರು 21 ಮಕ್ಕಳು ಶಾಲೆಗೆ ದಾಖಲಾತಿಯನ್ನೇ ಪಡೆದಿಲ್ಲ. ಒಟ್ಟು 182 ಬಾಲಕರು, ಒಟ್ಟು 132 ಬಾಲಕಿಯರು ಶಿಕ್ಷಣ ವಂಚಿತರು.

ಶಾಲೆಯಿಂದ ಹೊರಗುಳಿದವರಲ್ಲಿ 1ರಿಂದ 8ನೇ ತರಗತಿಯಲ್ಲಿ ಓದುತ್ತಿದ್ದ ಮಕ್ಕಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಶಾಲೆ ವಂಚಿತರಲ್ಲಿ ಬಾಲಕರ ಸಂಖ್ಯೆಯೇ ಹೆಚ್ಚು. ಕಡ್ಡಾಯ ಶಿಕ್ಷಣ ಕಾಯ್ದೆ ಇದ್ದರೂ ಪ್ರತಿ ವರ್ಷ ಈ ಸಂಖ್ಯೆಯಲ್ಲಿ ಏರಿಕೆ ಆಗುತ್ತಿರುವುದು ಶಿಕ್ಷಣ ಇಲಾಖೆಯನ್ನು ಚಿಂತೆಗೀಡು ಮಾಡಿದೆ.

ADVERTISEMENT

‌‘ಎಚ್‌.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನ ಕಾರ್ಮಿಕರು ಕೊಡಗಿನ ಕಾಫಿ ತೋಟ ಗಳಿಗೆ ವಲಸೆ ಹೋಗುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಮಕ್ಕಳನ್ನೂ ಶಾಲೆ ಬಿಡಿಸಿ ಕರೆದುಕೊಂಡು ಹೋಗು ತ್ತಾರೆ. ಹೀಗಾಗಿ, ಶಾಲೆಯಿಂದ ಹೊರಗು ಳಿಯುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಸರ್ವಶಿಕ್ಷಣ ಅಭಿಯಾನ ವಿಭಾಗದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎಸ್‌.ಪಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಎಚ್‌.ಡಿ.ಕೋಟೆ, ಹುಣಸೂರು, ಮೈಸೂರು ಉತ್ತರ, ನಂಜನಗೂಡು ಶಿಕ್ಷಣ ವಿಭಾಗಗಳಲ್ಲಿ ಹೆಚ್ಚಿನ ಮಕ್ಕಳು ಶಾಲೆ ತೊರೆದಿದ್ದಾರೆ. ಬುಡಕಟ್ಟು ಸಮುದಾಯದವರು ಹೆಚ್ಚು ಇರುವ ಪ್ರದೇಶಗಳಲ್ಲಿ ಈ ಸಮಸ್ಯೆ ಇದೆ. ಕೆಲ ಪೋಷಕರು ತಮ್ಮ ಮಕ್ಕಳನ್ನು ದುಡಿಮೆ ಹಚ್ಚುತ್ತಾರೆ. ಇನ್ನೂ ಕಾರ್ಮಿಕರು ವಲಸೆ ಹೋದ ಸ್ಥಳಗಳಲ್ಲಿ ಶಾಲೆಗಳು ಇರುವುದಿಲ್ಲ. ಹೀಗಾಗಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಸುಮಾರು 282 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು.

**
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶಾಲೆ ವಂಚಿತ ಮಕ್ಕಳ ಸಂಖ್ಯೆ ಹೆಚ್ಚಿದೆ. ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಪ್ರಯತ್ನ ನಡೆದಿದೆ
ಎಸ್‌.ಪಿ.ನಾಗರಾಜ್‌, ಡಿವೈಪಿಸಿ, ಸರ್ವಶಿಕ್ಷಣ ಅಭಿಯಾನ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.