ADVERTISEMENT

ಶೀಘ್ರದಲ್ಲಿ ಮೊಬೈಲ್ ಆಡಳಿತ: ವಿದ್ಯಾಶಂಕರ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 9:05 IST
Last Updated 12 ಏಪ್ರಿಲ್ 2012, 9:05 IST

ಮೈಸೂರು: ಭಾರತದಲ್ಲಿ ಆಡಳಿತ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ಮತ್ತು ಚುರುಕುತನ ತರಲು ಮೊಬೈಲ್ ಆಡಳಿತ (ಎಂ-ಆಡಳಿತ)ಬರಲಿದೆ. ಬೆರಳ ತುದಿಯ ನಿರ್ದೇಶನದ ಮೂಲಕವೇ ಎಲ್ಲ ರೀತಿಯ ಬಿಲ್ ಪಾವತಿಗಳೂ ಸಾಧ್ಯವಾಗಲಿವೆ!

ಬುಧವಾರ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (ಎನ್‌ಐಇ) ಕಾಲೇಜಿನಲ್ಲಿ ನ್ಯಾನೋ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿ ಸಿದ, ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಈ ವಿಷಯ ತಿಳಿಸಿದರು.

`ದೂರವಾಣಿ, ನೀರು, ವಿದ್ಯುತ್, ಶಾಲೆ ದಾಖಲೆ, ದೂರದ ಕಾಲೇಜಿಗೆ ಪ್ರವೇಶ ಸೇರಿದಂತೆ ಎಲ್ಲ ಬಗೆಯ ಕಾರ್ಯಗಳನ್ನು ನಮ್ಮ ಸೆಲ್‌ಫೋನ್ ಮೂಲಕವೇ ನಿರ್ವಹಿಸುವಂತಹ ತಂತ್ರಜ್ಞಾನ ಸದ್ಯದಲ್ಲಿ ಬರಲಿದೆ.

ಎಲೆಕ್ಟ್ರಾನಿಕ್ ಆಡಳಿತ (ಇ-ಆಡಳಿತ) ಈಗ ಜಾರಿಯಲ್ಲಿದೆ. ಹೊಸ ತಂತ್ರಜ್ಞಾನ ಬಳಕೆಯಿಂದ ಆಡಳಿತದಲ್ಲಿ ಹೆಚ್ಚು ಚುರುಕುತನ ಸಾಧ್ಯವಾಗಲಿದೆ ಇದರಿಂದ ದೇಶದ ಆರ್ಥಿಕ ವೃದ್ಧಿಯಾಗುತ್ತದೆ~ ಎಂದು ಹೇಳಿದರು.

`ನಮ್ಮ ಆರ್ಥಿಕ ವೃದ್ಧಿ ದರವು ಶೇಕಡಾ 11ಕ್ಕಿಂತ ಹೆಚ್ಚಿರಬೇಕು.  ಶೇಕಡಾ 1ರಷ್ಟು ದರ ಕುಸಿದಾಗಲೂ ನಾವು 50ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಅಸಮತೋಲವನ್ನು ಹೋಗಲಾಡಿಸಲು ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆ ಅವಶ್ಯಕ. ಜೊತೆಗೆ ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಜವಾಬ್ದಾರಿ ಯುವಜನತೆ ಮೇಲಿದೆ~ ಎಂದರು.

`ಇದೀಗ ಉಪಗ್ರಹ ಆಧಾರಿತ ಆಡಳಿತ  (ಜಿ-ಗವರ್ನನ್ಸ್) ಕೂಡ ಆರಂಭವಾಗಲಿದೆ. ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ದೇಶದಲ್ಲಿ ಬೆಂಗಳೂರು ಇವತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಗಳಲ್ಲಿ ಅಗ್ರಸ್ಥಾನ ದಲ್ಲಿದೆ. ಚಿಪ್ ವಿನ್ಯಾಸ ಮಾಡುವುದರಲ್ಲಿಯೂ ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುವ ಖ್ಯಾತಿ ಬೆಂಗಳೂರಿನದ್ದು. ಜಗತ್ತಿನಲ್ಲಿ ಇವತ್ತು ಸಿಗುತ್ತಿರುವ ಎಲ್ಲ ಸೆಲ್‌ಫೋನ್ ಸೆಟ್‌ಗಳಲ್ಲಿಯೂ ಬೆಂಗಳೂರಿನಲ್ಲಿ ತಯಾರಾದ ಒಂದು ಡಿಜಿಟಲ್ ಸಲಕರಣೆ ಇದ್ದೇ ಇರುತ್ತದೆ. 1963ರಲ್ಲಿ ಕೈಗಾರಿಕಾ ಡಿಸೈನಿಂಗ್‌ನಲ್ಲಿ ಸ್ಯಾಂಟಿಯಾಗೋ ಮುಂಚೂಣಿಯಲ್ಲಿತ್ತು. ಆದರೆ ಇಂದು ಶೇ 90ರಷ್ಟು ಭಾಗದ ವಿನ್ಯಾಸಗಾರಿಕೆಯಲ್ಲಿ ಬೆಂಗಳೂರು ಮುಂದಿದೆ~ ಎಂದರು.

`ಬಿಟಿ ಹತ್ತಿಯ ಬೆಳೆಗಳಿಂದಾಗಿ ದೇಶವು ಇವತ್ತು ಹತ್ತಿಯನ್ನು ರಫ್ತು ಮಾಡುವಲ್ಲಿ ಹೆಚ್ಚಿನ ಸಫಲತೆ ಗಳಿಸಿದೆ. ಮೊದಲು ಹತ್ತಿಯನ್ನು ನಾವು ಅಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ತಂತ್ರ ಜ್ಞಾನದ ಬಳಕೆಯಿಂದ ಹೆಚ್ಚಿನ ಲಾಭ ಸಾಧ್ಯವಾ ಗಿದೆ. ಕೃಷಿ, ನೀರಾವರಿ, ಆಹಾರ, ವಿದ್ಯುತ್ ಉತ್ಪಾದನೆ ಕ್ಷೇತ್ರಗಳಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರವೆಂದರೆ ತಂತ್ರಜ್ಞಾನವೊಂದೇ~ ಎಂದರು.

ಈ ಸಂದರ್ಭದಲ್ಲಿ  ಐಸಿಎಂಎಸ್ ಮಂಡಳಿ ಸದಸ್ಯ ಪ್ರೊ.ಜಿ.ಯು.ಕುಲಕರ್ಣಿ, ಎನ್‌ಐಇ  ಸಂಸ್ಥೆ ಅಧ್ಯಕ್ಷ ಎಸ್.ಆರ್. ಸುಬ್ಬರಾವ್, ಪ್ರೊ. ಜಿ.ಯು. ಶೇಖರ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.