ADVERTISEMENT

ಶುದ್ಧ ಕುಡಿಯುವ ನೀರು ಪೂರೈಸಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 6:20 IST
Last Updated 7 ಜನವರಿ 2012, 6:20 IST

ನಂಜನಗೂಡು: ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಜರುಗಿಸಬೇಕು ಎಂದು ಕಲ್ಲಹಳ್ಳಿ ಗ್ರಾಮಸ್ಥರು ಶುಕ್ರವಾರ ಶಾಸಕ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣ ಹೊರ ವಲಯದ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ ಅಹವಾಲು ಕೇಳಲು ಶಾಸಕರು ತೆರಳಿದ್ದರು. ಈ ವೇಳೆ  ಮನವಿ ಸಲ್ಲಿಸಿದ ಕಲ್ಲಹಳ್ಳಿ ಗ್ರಾಮಸ್ಥರು, ಜುಬಿಲೆಂಟ್ ಕಾರ್ಖಾನೆ ವತಿಯಿಂದ ಗ್ರಾಮಕ್ಕೆ ಕಪಿಲಾ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ನೀರು ಶುದ್ಧಿಕರಿಸದೆ ನೇರವಾಗಿ ಸರಬರಾಜು ಆಗುತ್ತಿದೆ. ಹಾಗಾಗಿ ಮಣ್ಣು, ಮರಳು, ಕಸ, ಕಡ್ಡಿ ನೀರಿನಲ್ಲಿ ಬರುತ್ತಿದೆ. ಈ ನೀರನ್ನು ಬಳಸುತ್ತಿರುವುದರಿಂದ ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಶುದ್ಧಿಕರೀಸಿದ ನೀರು ಒದಗಿಸಬೇಕು. ಕಾರ್ಖಾನೆಗೆ ಜಮೀನು ಕೊಟ್ಟ ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸಬೇಕು. ಸ್ಮಶಾನಕ್ಕೆ ನಿವೇಶನ ನೀಡಬೇಕು. ಸೂರಿಲ್ಲದವರಿಗೆ ಮನೆ ಹಂಚಿಕೆ ಮಾಡಬೇಕು ಎಂದು ಕೋರಿದರು.

ಅಲ್ಲದೆ ನದಿಯಲ್ಲಿ ಅಕ್ರಮ ಮರಳು ತೆಗೆಯುವರ ಬಗ್ಗೆ ಪೊಲೀಸರಿಗೆ ತಿಳಿಸಿದರೆ, ಅಕ್ರಮ ದಂಧೆಕೋರರಿಗೆ ಮಾಹಿತಿ ನೀಡಿದವರ ಹೆಸರು ಕೊಡುತ್ತಾರೆ. ನಂತರ ದಂಧೆಕೋರರು ನಮ್ಮ ಮೇಲೆ ದೌರ್ಜನ್ಯ ನಡೆಸಲು ಪೊಲೀಸರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದೂ ದೂರಿದರು. 

ಮನವಿಗೆ ಸ್ಪಂದಿಸದ ಶಾಸಕರು, ಜುಬಿಲೆಂಟ್ ಕಾರ್ಖಾನೆ ಆವರಣದಲ್ಲಿ ಆಡಳಿತ ಮಂಡಲಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ನೀರು ಶುದ್ಧಿಕರಣ ಘಟಕ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯತ್ ರಾಜ್ ತಾಂತ್ರಿಕ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಜಮೀನು ಕಳೆದುಕೊಂಡ ರೈತ ಕುಟಂಬಕ್ಕೆ ಸೂಕ್ತ ಕೆಲಸ ನೀಡುವಂತೆ ಕಾರ್ಖಾನೆ ಆಡಳಿತ ಮಂಡಲಿಗೆ
ಸೂಚನೆ ನೀಡಿದರು. ಉಪ ವಿಭಾಗಾಧಿಕಾರಿ ಡಿ.ಭಾರತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಗಯ್ಯ,  ಜುಬಿಲೆಂಟ್ ಕಾರ್ಖಾನೆ ಉಪಾಧ್ಯಕ್ಷ ಬಿಶ್ವಜಿತ್  ಮಿತ್ರ, ಎಸ್.ಕೆ.ವರ್ಮ, ಬಿಸಿಸಿ ಅಧ್ಯಕ್ಷ ಸುಬ್ಬಣ್ಣ ಮತ್ತಿತರರು ಇದ್ದರು. ತದನಂತರ ಕನಕನಗರ, ಕತ್ವಾಡಿಪುರ ಗ್ರಾಮಗಳಿಗೆ ಶಾಸಕರು ಭೇಟಿ ನಿಡಿ ಅಹವಾಲು ಪಡೆದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.