ADVERTISEMENT

ಶ್ರೀಮಹದೇಶ್ವರ ಭವನಕ್ಕೆ ಭೂಮಿ ಪೂಜೆ ನಾಳೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 10:25 IST
Last Updated 14 ಆಗಸ್ಟ್ 2012, 10:25 IST

ಮೈಸೂರು: ನಗರದ ಲಷ್ಕರ್ ಮೊಹಲ್ಲಾದ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ `ಶ್ರೀ ಮಹದೇಶ್ವರ ಭವನ~ದ ಗುದ್ದಲಿ ಪೂಜೆ ಮತ್ತು ಗಣ್ಯರಿಗೆ ಅಭಿನಂದನಾ ಸಮಾರಂಭ ಆ.15 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

`ಮಹದೇಶ್ವರ ಭವನದ ಗುದ್ದಲಿ ಪೂಜೆಯನ್ನು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೆರವೇರಿಸುವರು. ಶಾಸಕರಾದ ವಿ.ಶ್ರೀನಿವಾಸ ಪ್ರಸಾದ್, ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಟ್, ಮುಡಾ ಅಧ್ಯಕ್ಷ ನಾಗೇಂದ್ರ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಧ್ರುವಕುಮಾರ್, ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ~ ಎಂದು ಟ್ರಸ್ಟ್‌ನ ಗೌರವ ಅಧ್ಯಕ್ಷ, ಪಾಲಿಕೆ ಮಾಜಿ ಸದಸ್ಯರಾದ ಎಂ.ಶಿವಣ್ಣ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಸಣ್ಣ ಹೆಂಚಿನ ಮನೆಯಿಂದ ದೇವಸ್ಥಾನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಅನ್ನದಾನ ಮತ್ತು ಬಡ ಮಕ್ಕಳಿಗೆ ಪುಸ್ತಕ ವಿತರಣೆ ಮತ್ತು ಉಚಿತ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದೆ. ಇದೀಗ ಎಲ್ಲ ಜನಾಂಗದವರು ಒಗ್ಗೂಡಿ ಮಹದೇಶ್ವರ ಭವನ ನಿರ್ಮಾಣ ಮಾಡುತ್ತಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ~ ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಎಂ.ಎಸ್. ರವಿಕುಮಾರ್ (ಗುಡ್ಡಪ್ಪ), ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಂಠ, ಸಂಚಾಲಕ ಆರ್.ಜಿ.ಸುರೇಶ್, ಜಿ.ಪ್ರಕಾಶ್ ಕೆ.ಚಂದ್ರಶೇಖರ್ ಉಪಸ್ಥಿತರಿದ್ದರು.

ಸ್ವದೇಶಿ ಬಜಾರ್ ನಾಳೆ ಆರಂಭ
ಮೈಸೂರು: ಗಿಡಮೂಲಿಕೆ, ಆಯುರ್ವೇದ, ಆರೋಗ್ಯ ಮತ್ತು ಸಾವಯವ ಆಹಾರ ಪದಾರ್ಥಗಳು ಸ್ವದೇಶಿ ಬಜಾರ್‌ನಲ್ಲಿ ಇನ್ನು ಮುಂದೆ ಒಂದೇ ಸೂರಿನಡಿ ದೊರಕಲಿವೆ.

`ಬಿಗ್ ಬಜಾರ್ ಹಿಂಭಾಗದ ಜಯಲಕ್ಷ್ಮಿ ವಿಲಾಸ ರಸ್ತೆಯಲ್ಲಿ ಆ.15 ರಂದು ಬೆಳಿಗ್ಗೆ 10.30ಕ್ಕೆ ಸ್ವದೇಶಿ ಬಜಾರ್‌ನ್ನು ಸ್ವಾತಂತ್ರ್ಯ ಹೋರಾಟಗಾರ ಎಂ.ಆರ್.ರಾಮಶೇಷ್ ಉದ್ಘಾಟಿಸುವರು. ಪೊಲೀಸ್ ಕಮಿಷನರ್ ಕೆ.ಎಲ್.ಸುಧೀರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ~ ಎಂದು ಸ್ವದೇಶಿ ಬಜಾರ್‌ನ ಗೋಪಾಲಕೃಷ್ಣ ಕಟ್ಟಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಈಗ ಎಲ್ಲೆಡೆ ಕಲಬೆರಕೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟಲು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸಬೇಕು. ಇಂತಹ ಉತ್ಕೃಷ್ಟ ದರ್ಜೆಯ ಆಹಾರ ಪದಾರ್ಥಗಳು ಸ್ವದೇಶಿ ಬಜಾರ್‌ನಲ್ಲಿ ಲಭ್ಯ~ ಎಂದು ವಿವರಿಸಿದರು. ಭರತ್ ರಾಂಕ, ಮಲ್ಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.