ಕೆ.ಆರ್. ನಗರ: ತಾಲ್ಲೂಕಿನ ಡೋರ‌್ನಹಳ್ಳಿಯಲ್ಲಿ ಸಂತ ಅಂತೋಣಿ ಅವರ ವಾರ್ಷಿಕೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು.
ಜೂನ್ 4ರಿಂದ ಆರಂಭವಾದ ವಾರ್ಷಿಕೋತ್ಸವವು 9 ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನದಂತೆ ವಿಶೇಷ ಪೂಜೆಗಳು ನಡೆದವು. 10ನೇ ದಿನವಾದ ಗುರುವಾರ ನಸುಕಿನ 5 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಗಂಟೆಗೊಮ್ಮೆ ದಿವ್ಯ ಬಲಿಪೂಜೆ ಅರ್ಪಿಸಲಾಯಿತು. ಡೋರ‌್ನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಜೆ ಸಂತ ಅಂತೋಣಿ ಅವರ ಶೃಂಗಾರ ಭರಿತ ರಥೋತ್ಸವ ಮತ್ತು ಸಿಡಿಮದ್ದು ಪ್ರದರ್ಶನ ನಡೆಯಿತು.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ದೇಗುಲಕ್ಕೆ ಕೇವಲ ಕ್ರೈಸ್ತ ಧರ್ಮದವರು ಮಾತ್ರವಲ್ಲದೆ ಹಿಂದೂ ಹಾಗೂ ಮುಸ್ಲಿಮರು ಆಗಮಿಸಿ ಸಂತ ಅಂತೋಣಿಯವರಿಗೆ ನಮನ ಸಲ್ಲಿಸಿದರು.
ಸ್ನಾನ ಮಾಡಿ ಮುಡಿಯಿಂದ ದೇವಾಲಯಕ್ಕೆ ಆಗಮಿಸಿದ್ದ ಬಹುತೇಕ ಭಕ್ತಾದಿಗಳು ಮೇಣದ ಬತ್ತಿ ಹಚ್ಚಿ ಮತ್ತು ಹೂ ಮಾಲೆ ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಭಕ್ತಿಯಿಂದ ಸಂತ ಅಂತೋಣಿ ಅವರಲ್ಲಿ ಬೇಡಿಕೊಂಡರು.
ಹುಣಸೂರು ವಲಯ ಮುಖ್ಯ ಧರ್ಮ ಗುರುಗಳಾದ ಸಿರಿಲ್ ಡಿಸೋಜ, ಶಿವಮೊಗ್ಗದ ಶ್ರೇಷ್ಠ ಗುರು ಫೆಲಿಕ್ಸ್ ನೊರೋಹ್ನಾ, ಬೆಂಗಳೂರಿನ ಬಾಲ್‌ರಾಜ್, ಸ್ವಾಮಿ ಪ್ರಸನ್ನ, ಕೆ.ಆರ್. ನಗರ ಚರ್ಚ್‌ನ ಸ್ವಾಮಿ ಅಂತೋಣಿ ಸ್ವಾಮಿ, ಡೋರ‌್ನಹಳ್ಳಿ ಧರ್ಮಗುರು ಗಿಲ್ಬರ್ಟ್ ಡಿಸಿಲ್ವ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.
ರೈಲು ವ್ಯವಸ್ಥೆ: ಜಾತ್ರೆಗೆ ಬರುವ ಬಹುತೇಕ ಭಕ್ತರು ರೈಲನ್ನೇ ಅವಲಂಬಿಸಿರುತ್ತಾರೆ. ಡೋರ‌್ನಹಳ್ಳಿಯಲ್ಲಿ ರೈಲು ನಿಲ್ದಾಣ ಇರುವುದರಿಂದ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಪ್ರತಿದಿನ ಎಕ್ಸ್‌ಪ್ರೆಸ್ ರೈಲು ಹೊರತು ಪಡಿಸಿ ಉಳಿದಂತೆ ಇಲ್ಲಿಂದ ಸಂಚರಿಸುವ ರೈಲುಗಳು ಡೋರ‌್ನಹಳ್ಳಿ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ. ಜಾತ್ರೆ ಪ್ರಯುಕ್ತ ಜೂನ್ 10ರಿಂದ 14ರವರೆಗೆ ವಿಶೇಷವಾಗಿ ಮೈಸೂರು-ಶಿವಮೊಗ್ಗ ಪ್ಯಾಸೆಂಜರ್ ರೈಲು ನಿಲ್ಲಿಸಲಾಗುತ್ತಿದೆ.
ಬಸ್ ವ್ಯವಸ್ಥೆ: ಕೆ.ಆರ್. ನಗರದಿಂದ ಡೋರ‌್ನಹಳ್ಳಿ ಚರ್ಚ್ ಸುಮಾರು 6ಕಿ.ಮೀ ದೂರವಿದ್ದು, ಜಾತ್ರೆ ಪ್ರಯುಕ್ತ ಕೆ.ಆರ್. ನಗರ ಬಸ್ ನಿಲ್ದಾಣದಿಂದ 25ಬಸ್‌ಗಳ ಸಂಪರ್ಕ ಕಲ್ಪಿಸಲಾಗಿದೆ. ಗುರುವಾರ ಸುಮಾರು 150 ಟ್ರಿಪ್ ಬಸ್ ಸಂಚರಿಸಿದೆ. ಶುಕ್ರವಾರವೂ ಕೂಡ ಬಸ್ ಟ್ರಿಪ್ ಮುಂದುವರೆಯುವ ಸಾಧ್ಯತೆ ಇದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ದಶರಥ್ `ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.