ADVERTISEMENT

ಸರ್ಕಾರಿ ಕಾಲೇಜಿನಲ್ಲಿ ವಿನೂತನ ಪ್ರಯತ್ನ

ಅಣಬೆ ಕೃಷಿ ಪಾಠ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 6:25 IST
Last Updated 2 ಏಪ್ರಿಲ್ 2013, 6:25 IST

ಮೈಸೂರು: ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ರೂಪಿಸುವ ಉದ್ದೇಶದಿಂದ ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಶಿಕ್ಷಣದ ಜೊತೆ ಅಣಬೆ ಕೃಷಿಯ ಪಾಠವನ್ನು ಆರಂಭಿಸಿದ್ದು, ಮೊದಲ ಫಸಲು ಪಡೆದ ಸಂಭ್ರಮ ಕಾಲೇಜನ್ನು ಆವರಿಸಿದೆ.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ.ಎಸ್.ಜಿ. ರಾಮದಾಸ ರೆಡ್ಡಿ ಅವರ ಕಚೇರಿಯಲ್ಲಿ ಅಣಬೆ ಕೃಷಿ ಆರಂಭವಾಗಿದೆ. ಬೊಂಬುಗಳಿಗೆ ಮೂರು ಪಾಕೆಟ್ ಅಣಬೆಗಳನ್ನು ನೇತು ಹಾಕಲಾಗಿದೆ. ಈ ಪೈಕಿ ಒಂದು ಪಾಕೆಟ್‌ನ ಅಣಬೆ ಫಸಲಿಗೆ ಬಂದಿದೆ.

ರಾಷ್ಟ್ರೀಯ ಸೇವಾ ಯೋಜನೆಗೆ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಮಾರ್ಚ್ 9 ರಂದು ಕಾಲೇಜಿನಲ್ಲಿ ಅಣಬೆ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಕಾಲೇಜಿನ 1,076 ವಿದ್ಯಾರ್ಥಿಗಳ ಪೈಕಿ ಎನ್‌ಎಸ್‌ಎಸ್ ಘಟಕದ 73 ಮಂದಿ ಭಾಗವಹಿಸಿದ್ದರು. ಸರಳಾ ಅಗ್ರೋ ಪ್ರೊಡಕ್ಟ್‌ನ ತಜ್ಞರು ಅಣಬೆ ಕೃಷಿಯ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಇದು ವಿದ್ಯಾರ್ಥಿಗಳಲ್ಲಿ ಅಣಬೆ ಕೃಷಿಗೆ ಪ್ರೇರಣೆ ನೀಡಿತು. ಇದಕ್ಕೆ ಕಾಲೇಜಿನ ಅಧ್ಯಾಪಕರ ಬೆಂಬಲವೂ ದೊರಕಿತು. ಇದರ ಪ್ರತಿಫಲವಾಗಿ ಕಾಲೇಜಿನಲ್ಲಿ ಸೋಮವಾರ ಅಣಬೆ ಅರಳಿತು.

ಅಣಬೆ ಬೆಳೆದದ್ದು ಹೀಗೆ
ಮೈಸೂರು, ಎಚ್.ಡಿ.ಕೋಟೆ ತಾಲ್ಲೂಕಿನ ಹಳ್ಳಿಗಳ ವಿದ್ಯಾರ್ಥಿಗಳು ಅಣಬೆ ಕೃಷಿಗೆ ಅಗತ್ಯವಾದ ಬೊಂಬು, ಬತ್ತದ ಹುಲ್ಲು ತಂದಿದ್ದಾರೆ. ಹುಲ್ಲನ್ನು 2 ರಿಂದ 3 ಇಂಚುಗಳಷ್ಟು ಕತ್ತರಿಸಿ, 8 ಗಂಟೆ ತಣ್ಣೀರಿನಲ್ಲಿ ನೆನೆಸಿದ್ದಾರೆ. ಬಳಿಕ ಅರ್ಧ ಗಂಟೆ ಬಿಸಿಲಿಗೆ ಹಾಕಿ, ಶೇ 75ರಷ್ಟು ನೀರನ್ನು ಇಂಗಿಸಿದ್ದಾರೆ.

12*24 ಇಂಚಿನ ಪ್ಲಾಸ್ಟಿಕ್ ಕವರ್ ತಂದು ಅದಕ್ಕೆ ಐದು ಇಂಚು ಹುಲ್ಲು ಹಾಕಿದ್ದಾರೆ. ಹುಲ್ಲಿನ ಪಕ್ಕದಲ್ಲಿ 75 ಗ್ರಾಂ ಅಣಬೆ ಬೀಜಗಳನ್ನು ಬಿತ್ತಿದ್ದಾರೆ. ಒಂದು ಕವರಿನಲ್ಲಿ ಹೀಗೆ ನಾಲ್ಕು ಪದರಗಳ ರೀತಿ 300 ಗ್ರಾಂ ಅಣಬೆ ಬೀಜ ಹಾಕಿದ್ದಾರೆ.

ಬಳಿಕ ನೆರಿಗೆ ಬರುವಂತೆ ಪ್ಲಾಸ್ಟಿಕ್ ಬ್ಯಾಗ್‌ನ್ನು ಕಟ್ಟಿ, ಅದನ್ನು ಬೊಂಬುಗಳಿಗೆ ಇಳಿ ಬಿಟ್ಟಿದ್ದಾರೆ. ಅಣಬೆಗೆ ಸಾಕಷ್ಟು ಪ್ರಮಾಣದ ಗಾಳಿ, ಬೆಳಕು ಲಭ್ಯವಾಗುವಂತೆ ಕೊಠಡಿಯ ಕಿಟಕಿಗಳನ್ನು ತೆರೆದಿಟ್ಟಿದ್ದಾರೆ. ಪ್ಲಾಸ್ಟಿಕ್ ಕವರ್‌ಗೆ 12 ಕಡೆ ರಂಧ್ರಗಳನ್ನು ಮಾಡಿದ್ದಾರೆ. 28 ಡಿಗ್ರಿಗಿಂತ ಹೆಚ್ಚು ಉಷ್ಣಾಂಶವಿದ್ದರೆ ಅಣಬೆ ಬೆಳೆಯಲು ಸಾಧ್ಯವಿಲ್ಲ.

ಹೀಗಾಗಿ ಕೊಠಡಿಯನ್ನು ತಂಪಾಗಿಡುವ ಉದ್ದೇಶದಿಂದ ಅಲ್ಲಲ್ಲಿ ಗೋಣಿಚೀಲವನ್ನು ಹಾಕಿ, ನಿತ್ಯ ಅದಕ್ಕೆ ನೀರು ಹರಿಸಿದ್ದಾರೆ. 20 ದಿನಗಳ ಬಳಿಕ ಫಸಲು ಆರಂಭವಾಗಿದೆ. ಐದಾರು ದಿನಕ್ಕೊಮ್ಮೆ ಅದನ್ನು ಕಟಾವು ಮಾಡಲು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಪ್ರತಿ ಪಾಕೆಟ್‌ಗೆ 62 ರೂಪಾಯಿ ಖರ್ಚು ತಗಲಿದ್ದು, 3 ಕೆ.ಜಿ ಅಣಬೆ ನಿರೀಕ್ಷಿಸಲಾಗಿದೆ. ಸರಳಾ ಅಗ್ರೋ ಪ್ರೊಡೆಕ್ಟ್ ಸಂಸ್ಥೆ ಕೆ.ಜಿ.ಗೆ 100 ರೂಪಾಯಿಯಂತೆ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ.

ಇದು ಇನ್ನೂ ಕೆಲ ವಿದ್ಯಾರ್ಥಿಗಳಲ್ಲಿ ಅಣಬೆ ಕೃಷಿ ಮಾಡುವ ಬಯಕೆಯನ್ನು ಹುಟ್ಟುಹಾಕಿದೆ. ನಾಲ್ವರು ವಿದ್ಯಾರ್ಥಿಗಳು ಇದೇ ಮಾದರಿಯ ಕೃಷಿಯನ್ನು ಮನೆಯಲ್ಲೂ ಆರಂಭಿಸಿದ್ದಾರೆ. ಕಾಲೇಜು ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಪಠ್ಯ-ಪುಸ್ತಕಗಳ ಖರೀದಿ, ಪ್ರಯಾಣಕ್ಕೆ ಈ ಆದಾಯವನ್ನು ಬಳಸಲು ಉದ್ದೇಶಿಸಿದ್ದಾರೆ. ಪೋಷಕರ ಮೇಲೆ ಅವಲಂಬಿತರಾಗದೇ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಕನಸಿಗೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಬಣ್ಣ ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.