ADVERTISEMENT

ಸಿ.ಎಂ ನಿವಾಸದ ಬಳಿ ರೋಡ್‌ ಷೋ

ಸುಳ್ಳು ಹೇಳುವುದೇ ಬಿಜೆಪಿ ಸಂಸ್ಕೃತಿ: ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2018, 13:20 IST
Last Updated 7 ಮೇ 2018, 13:20 IST

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಶಾರದಾದೇವಿನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ರೋಡ್‌ ಷೋ ನಡೆಸಿದರು.

ತಮ್ಮ ನಿವಾಸದಿಂದ ಅನತಿ ದೂರದಲ್ಲಿರುವ ಶಾರದಾದೇವಿನಗರ ವೃತ್ತದಿಂದ ರಾತ್ರಿ ಎಂಟು ಗಂಟೆಗೆ ರೋಡ್‌ ಷೋ ಆರಂಭಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ‘ಚಾಮುಂಡೇಶ್ವರಿಯಲ್ಲಿ ಗೆಲ್ಲುವುದು ನಾನೇ. ಮುಂದಿನ ಮುಖ್ಯಮಂತ್ರಿಯೂ ನಾನೇ’ ಎಂದು ಹೇಳುತ್ತಾ ಮತಯಾಚಿಸಿದರು.

ಕಾಂಗ್ರೆಸ್‌ ಪಕ್ಷದವರು ಈ ಮೊದಲು ರೂಪಿಸಿದ ಕಾರ್ಯಕ್ರಮದ ಪಟ್ಟಿ ಪ್ರಕಾರ ಪ್ರಚಾರ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ಆರಂಭವಾಗಿಬೇಕಿತ್ತು. ಆದರೆ, ಬರೋಬ್ಬರಿ ಏಳು ಗಂಟೆ ವಿಳಂಬವಾಗಿ ಶುರುವಾಯಿತು. ಪಾಲಿಕೆ ಸದಸ್ಯ ಜಗದೀಶ್‌, ಮಾಜಿ ಶಾಸಕ ಎಂ.ಸತ್ಯನಾರಾಯಣ ಜೊತೆಗಿದ್ದರು.

ADVERTISEMENT

ಬಿಜೆಪಿ ವಿರುದ್ಧ ವಾಗ್ದಾಳಿ: ‘ವಿದೇಶದಲ್ಲಿನ ಕಪ್ಪು ಹಣ ತಂದು ಎಲ್ಲರ ಬ್ಯಾಂಕ್‌ ಖಾತೆಗಳಿಗೆ ₹ 15 ಲಕ್ಷ ಹಾಕುವುದಾಗಿ ಪ‍್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷಗಳ ಹಿಂದೆ ಹೇಳಿದ್ದರು. ಇದುವರೆಗೆ ಆ ಹಣ ಬಂದಿಲ್ಲ. ಮಾತು ತಪ್ಪಿದ ಇವರಿಗೆ ಜನರು ಏನು ಮಾಡಬೇಕು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಾಗಲಕೋಟೆಯಲ್ಲಿ ನಾನು ಟೆಕ್ಸ್‌ಟೈಲ್ ಪಾರ್ಕ್ ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ, ಸುಳ್ಳು ಹೇಳುವುದೇ ಬಿಜೆಪಿ ಸಂಸ್ಕೃತಿ. ನಾಲಿಗೆಯು ಸಂಸ್ಕೃತಿ ಹೇಳುತ್ತದೆ. ಆಚಾರವಿಲ್ಲದ ನಾಲಿಗೆ’ ಎಂದು ಟೀಕಿಸಿದರು.

‘ತಾವೇನು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಲು ಬಿಜೆಪಿ ಮುಖಂಡರಿಗೆ ಸಾಧ್ಯವಿಲ್ಲ. ಜನರಿಗೆ ನೀಡಿದ ಭರವಸೆ ಈಡೇರಿಸಿಲ್ಲ’ ಎಂದರು.

‘ಮುಖ್ಯಮಂತ್ರಿ, ಮುಖ್ಯಮಂತ್ರಿ ಎಂದು ಯಡಿಯೂರಪ್ಪ ನಿತ್ಯ ಕನವರಿಸುತ್ತಿದ್ದಾರೆ. ಸಾಲಮನ್ನಾ ಮಾಡಲು ಹಣವಿಲ್ಲ, ನಮ್ಮ ಬಳಿ ನೋಟ್ ಪ್ರಿಂಟ್ ಮಷಿನ್ ಇಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದ್ದ ಅವರು ಈಗ ಸಾಲಮನ್ನಾ ಮಾಡುವ ಭರವಸೆ ನೀಡಿರುವುದು ಹಾಸ್ಯಾಸ್ಪದ. ಕಳಂಕಿತರಿಗೆ ಅಧಿಕಾರ ಸಿಗುವುದಿಲ್ಲ. ಅಮಿತ್ ಶಾ ಅವರಿಂದ ಯಾವುದೇ ತಂತ್ರ ಮಂತ್ರ ಸಾಧ್ಯವಿಲ್ಲ. ಅವರೊಬ್ಬ ಕಾಮಿಡಿಯನ್‌’ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಸೇರ್ಪಡೆ: ವಿಮಾನ ನಿಲ್ದಾಣದಿಂದ ನೇರವಾಗಿ ಕೆಸರೆ ಬಳಿಯ ರೆಸಾರ್ಟ್‌ಗೆ ತೆರಳಿದರು. ವರುಣಾ ಕ್ಷೇತ್ರದ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ (ಗ್ರಾಮೀಣ) ಬಿ.ಜೆ.ವಿಜಯಕುಮಾರ್‌, ಮುಖಂಡರಾದ ಜಿ.ವಿ.ಸೀತಾರಾ, ವಿಷ್ಣುನಾದನ್‌ ಇದ್ದರು.

**
ನಮ್ಮ ವಿರುದ್ಧ ಮಾತನಾಡಲು ಬಿಜೆಪಿ ಮುಖಂಡರಿಗೆ ಯಾವುದೇ ವಿಚಾರ ಇಲ್ಲ. ನಮ್ಮ ಅಭಿವೃದ್ಧಿ ಟೀಕಿಸಲು ಅವರಿಗೆ ಸಾಧ್ಯವಿಲ್ಲ‌‌
– ಸಿದ್ದರಾಮಯ್ಯ‌,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.