ADVERTISEMENT

ಸಿದ್ದರಾಮಯ್ಯ ಅಂತಿಮ ಹಂತದ ಪ್ರಚಾರ

ಇದು ನನ್ನ ಕೊನೆಯ ಚುನಾವಣೆ, ಗೆಲ್ಲಿಸಿಕೊಡಿ: ಸಿ.ಎಂ ಮನವಿ

​ಪ್ರಜಾವಾಣಿ ವಾರ್ತೆ
Published 10 ಮೇ 2018, 8:45 IST
Last Updated 10 ಮೇ 2018, 8:45 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್‌ ಷೋ ನಡೆಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್‌ ಷೋ ನಡೆಸಿದರು   

ಮೈಸೂರು: ‘ಇದು ನನ್ನ ಕೊನೆಯ ಚುನಾವಣೆ. ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ. ಕೊನೆಯ ಬಾರಿ ಗೆಲ್ಲಿಸಿ’ ಎಂದು ಮನವಿ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು.

ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಗುರುವಾರ ಸಂಜೆ ಕೊನೆಗೊಳ್ಳಲಿದೆ. ಸಿದ್ದರಾಮಯ್ಯ ಅವರು ಪ್ರಚಾರದ ಕೊನೆಯ ಎರಡು ದಿನಗಳನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಗುರುವಾರ ಸಂಜೆಯವರೆಗೆ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

ಬುಧವಾರ ಮಧ್ಯಾಹ್ನ ಹೊಸಹುಂಡಿ ಗ್ರಾಮದಿಂದ ಅವರು ಪ್ರಚಾರ ಆರಂಭಿಸಿದರು. ಗ್ರಾಮಸ್ಥರು ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡಿ ಮುಖ್ಯಮಂತ್ರಿಗೆ ಸ್ವಾಗತ ನೀಡಿದರು. ಗ್ರಾಮದೇವತೆಗೆ ಕೈಮುಗಿದು ಆಶೀ ರ್ವಾದ ಪಡೆದ ಅವರು ತೆರೆದ ವಾಹನದಲ್ಲಿ ರೋಡ್‌ ಷೋ ನಡೆಸಿದರು.

ADVERTISEMENT

ಹೊಸಹುಂಡಿ ಗ್ರಾಮದ ನಂತರ ಗೆಜ್ಜಗಳ್ಳಿಯಲ್ಲಿ ಮತಯಾಚಿಸಿದರು. ನೆರೆದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ, ‘ರಾಜಕೀಯದಲ್ಲಿ ನನಗೆ ಮರುಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಕೊನೆಯ ಚುನಾವಣೆ ಎದುರಿಸುತ್ತಿದ್ದೇನೆ. ಇಲ್ಲಿಂದ ಗೆದ್ದು ಹೋದ ಬಳಿಕ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ಹಿಂದೆ ಸ್ಪರ್ಧಿಸಿದ್ದಾಗ ತೋರಿದ್ದ ಪ್ರೀತಿಯನ್ನು ಮೇ 12ರಂದು ತೋರಿಸಿ ಗೆಲ್ಲಿಸುವ ಮೂಲಕ ವಿಧಾನಸೌಧಕ್ಕೆ ಕಳುಹಿಸಿ’ ಎಂದು ಮನವಿ ಮಾಡಿದರು.

‘ಈ ಕ್ಷೇತ್ರದ ಹಾಲಿ ಶಾಸಕರಾಗಿರುವ ವ್ಯಕ್ತಿ, ಐದು ವರ್ಷ ಕಾಲಹರಣ ಮಾಡಿದ್ದಾರೆ. ನಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ತನ್ನದೇ ಸಾಧನೆ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ವಿಧಾನಸೌಧದಲ್ಲಿ ಕ್ಷೇತ್ರದ ಪರವಾಗಿ ಅವರು ಒಂದು ಪ್ರಶ್ನೆಯನ್ನು ಕೇಳಿಲ್ಲ. ಅಂತಹ ವ್ಯಕ್ತಿಯಿಂದ ಹೇಗೆ ಅಭಿವೃದ್ಧಿ ಸಾಧ್ಯ’ ಎಂದು ಪ್ರಶ್ನಿಸಿ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರನ್ನು ಟೀಕಿಸಿದರು.

‘10 ವರ್ಷಗಳ ಹಿಂದೆ ಈ ಗ್ರಾಮಕ್ಕೆ ಬಂದಿದ್ದೆ. ಈಗ ಮತ್ತೆ ಬಂದಿದ್ದೇನೆ. ಗೆದ್ದ ಮೇಲೆ ಬರುತ್ತೇನೆ. ಕ್ಷೇತ್ರದ ಅಭಿವೃದ್ಧಿ ಮಾಡುವ ವ್ಯಕ್ತಿಯನ್ನು ಬೆಂಬಲಿಸಿ’ ಎಂದು ಹೇಳಿದರು‌.

ಮಂಡಕಳ್ಳಿ ಗ್ರಾಮಕ್ಕೆ ಬಂದ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮತಯಾಚಿಸಿದರು.

ಮುಖ್ಯಮಂತ್ರಿ ರಾತ್ರಿಯವರೆಗೆ 15ಕ್ಕೂ ಅಧಿಕ ಗ್ರಾಮಗಳು ಮತ್ತು ಮೂರು ಬಡಾವಣೆಗಳಲ್ಲಿ ಪ್ರಚಾರ ನಡೆಸಿದರು. ಕಡಕೊಳ, ಬ್ಯಾತಹಳ್ಳಿ, ದಡದಹಳ್ಳಿ, ಸಿಂಧುವಳ್ಳಿ, ಚಿಕ್ಕಕಾನ್ಯ, ಡಿ.ಕಾಟೂರು, ಮಾರ್ಬಳ್ಳಿ, ಆಲನಹಳ್ಳಿ ಗ್ರಾಮಗಳಲ್ಲಿ ರೋಡ್‌ ಷೋ ಮೂಲಕ ಮತಯಾಚಿಸಿದರು. ಸ್ಥಳೀಯ ಮುಖಂಡರು ಸಾಥ್‌ ನೀಡಿದರು.
*
ಜಿ.ಟಿ.ದೇವೇಗೌಡ ಪ್ರಚಾರ

ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ಬಡಗಲಹುಂಡಿ. ಕೇರ್ಗಳ್ಳಿ, ರಾಮನಹುಂಡಿ ಮತ್ತು ಕೆ.ಸಾಲುಂಡಿ ಗ್ರಾಮಗಳಲ್ಲಿ ಮತಯಾಚಿಸಿದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಾಥ್‌ ನೀಡಿದರು.

ನಾಗನಹಳ್ಳಿಯಲ್ಲಿ ಎತ್ತಿನಗಾಡಿ ಏರಿ ಪ್ರಚಾರ ಕೈಗೊಂಡರು. ಕಳಶ ಹೊತ್ತ ಮಹಿಳೆಯರು ದೇವೇಗೌಡ ಅವರನ್ನು ಸ್ವಾಗತಿಸಿದರು.

ನಗರದ ರಾಮಕೃಷ್ಣ ವೃತ್ತದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು. ವರುಣಾಕ್ಕೆ ಹೋಗಿ 12 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಕ್ಷೇತ್ರಕ್ಕೆ ಒಮ್ಮೆಯೂ ಬಂದಿಲ್ಲ. ಯಾವುದೇ ಸಭೆ ಕರೆದಿಲ್ಲ. ಸಾರ್ವಜನಿಕರ ಜತೆ ಮಾತನಾಡಿಲ್ಲ. ಈಗ ಬಂದು ಮತ ಕೇಳುತ್ತಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.