ADVERTISEMENT

ಸೌಲಭ್ಯ ವಂಚಿತ ಕುಂದನಹಳ್ಳಿ ಜನತಾ ಬಡಾವಣೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 8:45 IST
Last Updated 20 ಜೂನ್ 2012, 8:45 IST

ಪಿರಿಯಾಪಟ್ಟಣ: ತಾಲ್ಲೂಕಿನ ಕುಂದನಹಳ್ಳಿ ಜನತಾ ಬಡಾವಣೆ ಮೂಲ ಸೌಕರ್ಯಗಳಿಂದ ದೂರವಾಗಿದ್ದು, ನಿವಾಸಿಗಳ ಸ್ಥಿತಿ ಗಂಭೀರವಾಗಿದೆ.ಈ ಬಡಾವಣೆ ನಿರ್ಮಾಣಗೊಂಡು 15 ವರ್ಷ ಕಳೆದಿದ್ದರೂ ಇಡೀ ಬಡಾವಣೆಯಲ್ಲಿ ಸರಿಯಾಗಿ ರಸ್ತೆ, ಚರಂಡಿಯನ್ನು ನಿರ್ಮಿಸಿಲ್ಲ.

ಮಳೆಗಾಲ ಬಂದರೆ ದೂರದಿಂದ ಮಳೆ ನೀರು ಕಾಲುವೆಯಂತೆ ರಸ್ತೆಯಲ್ಲೆ ಹರಿದು ಚರಂಡಿಗೂ ರಸ್ತೆಗೂ ವ್ಯತ್ಯಾಸ ತಿಳಿಯದಂತಾಗಿದೆ.ಕಡುಬಡವರು ವಾಸಿಸುವ 35ಮನೆಗಳಿದ್ದು, ಮೂರು ಬೀದಿಗಳಿವೆ. ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರವಿದೆ.

ಮಕ್ಕಳು ಶಾಲೆಯ ಮುಂದೆ ನಿಲ್ಲುವ ಮಳೆ ನೀರು ಆಟದ ಮೈದಾನದಲ್ಲಿ ಪುಟ್ಟ ಕೆರೆಯನ್ನೆ ನಿರ್ಮಿಸುತ್ತದೆ. ಮಳೆಗಾಲದಲ್ಲಿ ಮಕ್ಕಳು ಮತ್ತು ಅಂಗನವಾಡಿ ಶಿಶುಗಳು ಮಳೆ ನೀರಿನಲ್ಲಿ ಸರ್ಕಸ್ ಮಾಡಿಕೊಂಡು  ತೆರಳಬೇಕಾಗಿದೆ. ಸರ್ಕಾರಿ ಶಾಲೆಗೆ ಕಾಂಪೌಂಡ್ ಸಹ ಇಲ್ಲದ ಕಾರಣ ನಾಯಿ, ದನಗಳ ಬಿಡಾರವಾಗಿದೆ. ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಜನಸ್ಪಂದನ ಸಭೆಗಳಲ್ಲಿ ಅಧಿಕಾರಿಗಳಿಗೆ ಬಡಾವಣೆಗೆ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
 
ಹಿಂದಿನ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಸತ್ಯವತಿ ಅವರು ಬಡಾವಣೆಗೆ ಖುದ್ದು ಭೇಟಿ ನೀಡಿ ನೈಜಸ್ಥಿತಿ ನೋಡಿಕೊಂಡು ಹೋದರೂ  ಯಾವುದೇ ಪ್ರಯೋಜವಾಗಲಿಲ್ಲ. ಮನೆಗಳಿಗೆ ಶೌಚಾಲಯಗಳಿಲ್ಲದ ಕಾರಣ 2010ರಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುಂಡಿ ತೆಗೆದು ಸರ್ಕಾರದ ಹಣಕ್ಕಾಗಿ ಕಾದು ಕುಳಿತರೂ ಹಣ ಬರಲಿಲ್ಲ, ಗುಂಡಿಯಲ್ಲಿ ಮಕ್ಕಳು, ನಾಯಿ, ದನಕರುಗಳ ಬೀಳತೊಡಗಿದ್ದರಿಂದ ಗುಂಡಿಯನ್ನು ಮುಚ್ಚಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಕುಂದನಹಳ್ಳಿ ಜನತಾ ಬಡಾವಣೆಯಲ್ಲಿ ವಾಸವಾಗಿರುವ ಜಯಮ್ಮ ಎನ್ನುವರಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯವರು ನಿವೇಶನ ನೀಡದಿದ್ದಾಗ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅವರ ನಿರ್ದೇಶನದ ಮೇರಗೆ ವಾಸಕ್ಕೆ ನಿವೇಶನ ಮತ್ತು ಆಶ್ರಯ ಯೋಜನೆಯಲ್ಲಿ ಮನೆ ಮಂಜೂರಾಯಿತು.

ಮುಖ್ಯಮಂತ್ರಿಗಳಿಗೆ ಸಹ ದೂರು ನೀಡಿದ್ದರಿಂದಮೈಸೂರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಸೂಕ್ತ ಕ್ರಮಕೈಗೊಳ್ಳುವಂತೆ ಮತ್ತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸಹ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಸಯ್ಯದ್ ಇಸಾಕ್ ಅಲಿ ಅಹಮ್ಮದ್ ಮೇ 23, 2012ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.