ADVERTISEMENT

ಹಾಲಿನ ದರ ಹೆಚ್ಚಿಸಿ: ದರ್ಶನ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:10 IST
Last Updated 2 ಜನವರಿ 2012, 10:10 IST

ಮೈಸೂರು: `ಹಾಲು ಉತ್ಪಾದನೆಗೆ ಖರ್ಚು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರವನ್ನು ಏರಿಸಬೇಕು~ ಎಂದು ನಟ ದರ್ಶನ್ ಸರ್ಕಾರವನ್ನು ಒತ್ತಾಯಿಸಿದರು.

ಮೈಸೂರು ನಗರ ಗೋಪಾಲಕರ ಸಂಘದ ವತಿಯಿಂದ ತೂಗುದೀಪ ಶ್ರೀನಿವಾಸ್ ಅವರ ಸವಿ ನೆನಪಿಗಾಗಿ ಜೆ.ಕೆ. ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

`ನಾನು ಕೂಡ ಒಬ್ಬ ಗೋಪಾಲಕ. ಹಸು ಸಾಕಾಣಿಕೆಯ ಕಷ್ಟಗಳು ಅರ್ಥವಾಗುತ್ತವೆ. ಉತ್ಪಾದನೆ ಮಾಡಿದ ಹಾಲನ್ನು ಮಾರಾಟ ಮಾಡುವ ಬದಲು ಕುದುರೆಗೆ ಕುಡಿಸುತ್ತೇನೆ. ಹಸುವಿನ ತಿಂಡಿ, ಬೂಸಾಗಳ ಬೆಲೆ ಗಗನಕ್ಕೇರುತ್ತಿದೆ. ಅನ್ಯ ರಾಜ್ಯಗಳಲ್ಲಿ ಗೋಪಾಲಕ ಹಾಗೂ ಗ್ರಾಹಕರ ಮಧ್ಯ ಯಾವ ದಲ್ಲಾಳಿಯೂ ಇಲ್ಲ. ಕರ್ನಾಟಕದಲ್ಲೂ ಅಂಥ ವ್ಯವಸ್ಥೆ ಜಾರಿಗೆ ಬರಬೇಕು~ ಎಂದು ಹೇಳಿದರು.

ಶಾಸಕ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, `ಹೈನುಗಾರಿಕೆ ರೈತರ ಕೈ ಹಿಡಿದಿದೆ. ಆರ್ಥಿಕವಾಗಿ ಸಬಲರಾಗಲು ಇದು ಸಹಕಾರಿ~ ಎಂದು ಹೇಳಿದರು.

ಮಾಜಿ ಮೇಯರ್ ಡಿ.ಧ್ರುವಕುಮಾರ್ ಪರವಾಗಿ ನಟ ದರ್ಶನ್ ಅವರಿಗೆ ಕರುವನ್ನು ಉಡುಗೊರೆಯಾಗಿ ನೀಡಲಾಯಿತು.

ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಬಸವೇಗೌಡ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸಿ.ದಾಸೇಗೌಡ, ಸಂಘದ ಅಧ್ಯಕ್ಷ ಡಿ.ನಾಗಭೂಷಣ್, ಪಾಲಿಕೆ ಸದಸ್ಯ ಸಿ.ಮಾದೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಲಘು ಲಾಠಿ ಪ್ರಹಾರ:

ನಟ ದರ್ಶನ್ ನೋಡಲು ಅವರ ನೂರಾರು ಅಭಿಮಾನಿಗಳು ಜೆ.ಕೆ. ಮೈದಾನದಲ್ಲಿ ಜಮಾಯಿಸಿದ್ದರು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಅನೇಕರು ಕೇಕೆ ಹಾಕತೊಡಗಿದರು. ಹೀಗಾಗಿ ವೇದಿಕೆಯ ಮುಂಭಾಗ ನೂಕು ನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

ಮಹದೇವಗೆ ಒಂದು ಲಕ್ಷ ಬಹುಮಾನ

ಕ್ಯಾತಮಾರನಹಳ್ಳಿಯ ಮಹದೇವ್ ಪ್ರಥಮ- ರೂ.1 ಲಕ್ಷ ಹಾಗೂ ಬೆಳ್ಳಿ ಟ್ರೋಫಿ (42.5 ಕೆಜಿ ಹಾಲು)
ಬೆಂಗಳೂರಿನ ವೆಂಕಟೇಶ್ ದ್ವಿತೀಯ- 75 ಸಾವಿರ ರೂಪಾಯಿ (41.4 ಕೆಜಿ ಹಾಲು)
ಬೆಂಗಳೂರಿನ ಜೆಪಿ ನಗರದ ಚಂದ್ರಮತಿ ಪ್ರಕಾಶ್ ತೃತೀಯ- 50 ಸಾವಿರ ರೂಪಾಯಿ (41.1 ಕೆಜಿ ಹಾಲು)
ಬೆಂಗಳೂರಿನ ಗೀತಾ ಯತೀಶ್ ನಾಲ್ಕನೇ ಸ್ಥಾನ- 25 ಸಾವಿರ ರೂಪಾಯಿ (40.5 ಕೆಜಿ ಹಾಲು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.