ADVERTISEMENT

ಹಿಮಾಲಯದಂತೆ ಭ್ರಷ್ಟಾಚಾರ: ನಂಜರಾಜಅರಸು ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 6:54 IST
Last Updated 15 ಜುಲೈ 2013, 6:54 IST

ಮೈಸೂರು: `ಹಿಮಾಲಯ ಪರ್ವತದಂತೆ ಬೆಳೆದಿರುವ ಭ್ರಷ್ಟಾಚಾರವನ್ನು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರೊಬ್ಬರಿಂದ ಕರಗಿಸಲು ಸಾಧ್ಯವಿಲ್ಲ. ಆದರೆ ನಾನೊಬ್ಬನೇ ಕರಗಿಸುತ್ತೇನೆಂದು ಅವರು ಹೊರಟಿದ್ದಾರೆ' ಎಂದು ಇತಿಹಾಸ ತಜ್ಞ ನಂಜರಾಜ ಅರಸ್ ಕುಟುಕಿದರು.

ನಗರದ ಜೆ.ಕೆ. ಮೈದಾನದ ಅಲ್ಯುಮಿನಿ ಅಸೋಸಿಯೇಷನ್ ಕಟ್ಟಡದ ಮಿನಿ ಸಭಾಂಗಣದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ ಏರ್ಪಡಿಸಿದ್ದ `ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರ ಹಾಗೂ ಆಮ್ ಆದ್ಮಿ ಪಕ್ಷದ ಪಾತ್ರ' ಕುರಿತ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

`ದೇವರಾಜ ಅರಸು ಶಾಸಕರಿಗೆ ಹಣ ನೀಡುವ ಮೂಲಕ ಮುಖ್ಯಮಂತ್ರಿಯೇ ಭ್ರಷ್ಟಾಚಾರವನ್ನು ಕಾನೂನುಬದ್ಧ ಮಾಡಿದರು ಎಂದು ಮಾಧ್ಯಮದಲ್ಲಿ ಟೀಕಿಸಲಾಗಿತ್ತು. ಆದರೆ ಅವರು ಮಾಡಿದ್ದು ಒಳ್ಳೆಯ ಕೆಲಸಕ್ಕೆ. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಜಾರಿ ಮಾಡಿದರು. ಆದರೆ ರೈತರ ಬಳಿ ಇಂದು ಜಮೀನು ಇಲ್ಲದಂತಾಗಿದೆ. ಇಂದಿನ ರಾಜಕೀಯ ಅಗ್ನಿಪರೀಕ್ಷೆಗೆ ಒಡ್ಡಿದಂತೆ ಇದೆ. ರಾಜಕಾರಣಿಗಳ ಆಸ್ತಿ ದಿನೆ ದಿನೇ ಬೆಳೆಯುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಮದಾಸ್ ಸೋಲು ನನ್ನ ಇಚ್ಛೆಯಾಗಿತ್ತು: `ಮಾಜಿ ಸಚಿವ   ಎಸ್.ಎ. ರಾಮದಾಸ್ ಸೋಲಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಅವರನ್ನು ಸೋಲಿಸಬೇಕೆಂದು ಬಯಸಿದ್ದ ಶಾಸಕ ಎಂ.ಕೆ. ಸೋಮಶೇಖರ್, ಎಚ್.ವಿ. ರಾಜೀವ್ ಅವರಿಗೆ ನನ್ನ ಬೆಂಬಲ ಇತ್ತು. ರಾಮದಾಸ್ ಭೂಮಿಯನ್ನು ಎಷ್ಟು ಕಬಳಿಸಿದ್ದಾರೆ ಎಂದರೆ ಎಂತಹವರಿಗೂ ಹೃದಯಾಘಾತವಾಗುತ್ತದೆ. ಮಹಿಶಾಸುರ ವಧೆಯಂತೆ ಈಗ ಅವರ ಸಂಹಾರವಾಗಿದೆ' ಎಂದು ಹೇಳಿದರು.

`ಜಯಪ್ರಕಾಶ್ ನಾರಾಯಣ್ ಹೋರಾಟದ ನಂತರ ನಾನು ನೋಡಿದ್ದು ಅಣ್ಣಾ ಹಜಾರೆ ಅವರ ಶಕ್ತಿಯನ್ನು. ಆಮ್ ಆದ್ಮಿ ಪಕ್ಷದ ನೇತೃತ್ವವನ್ನು ಹಜಾರೆ ವಹಿಸಿದ್ದರೆ ಪಕ್ಷಕ್ಕೆ ಇನ್ನೂ ಚೆನ್ನಾಗಿರುತ್ತಿತ್ತು. ಮನುಷ್ಯನಿಗೆ ಆಸೆ ಇರಬೇಕು. ನಿರೀಕ್ಷೆ ಇರಬಾರದು. ಮಾತಿನ ಶೂರರು ನಮ್ಮಲ್ಲಿ ಹೆಚ್ಚು ಇದ್ದಾರೆ. ಆದರೆ ಹೋರಾಟದ ಮೂಲಕ ಸಮಾಜ ಶುದ್ಧ ಮಾಡುವ ಕೆಲಸ ಆಗಬೇಕು' ಎಂದು ಹೇಳಿದರು.

ಮಾಹಿತಿ ಹಕ್ಕು ಕಾರ್ಯಕರ್ತ ವಿದ್ಯಾರಣ್ಯ ಮಾತನಾಡಿ, `ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೆ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಭಾಗವಹಿಸುವಿಕೆ ಮೂರು ಅಂಶಗಳು ಇರಬೇಕು. ರಾಜಕೀಯ ವ್ಯವಸ್ಥೆಯಲ್ಲಿ ಪರ್ಯಾಯ ಶಕ್ತಿ ಬೇಕು. ಸಾರ್ವಜನಿಕರಿಗೆ ಯಾವ ಕೆಲಸಗಳನ್ನು ಮಾಡಿಕೊಡಬೇಕು ಎಂಬ ಪ್ರಜ್ಞೆ ಸರ್ಕಾರದ ಪಾಲುದಾರಿಕೆ ಸಂಸ್ಥೆಗಳಿಗೆ ಗೊತ್ತಿರಬೇಕು.

ಸರ್ಕಾರದ ಎಲ್ಲ ಯೋಜನೆ, ಕಾರ್ಯಕ್ರಮಗಳಲ್ಲೂ ಜನರ ಭಾಗವಹಿಸುವಿಕೆ ಇರಬೇಕು' ಎಂದು ತಿಳಿಸಿದರು. ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ವಿನೋದ್, ರಾಜ್ಯ ಖಜಾಂಚಿ ಚಂದ್ರಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.