ADVERTISEMENT

ಹುಂಡಿಮಾಳ: ಸಮಸ್ಯೆಗಳ ಆಗರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 6:10 IST
Last Updated 15 ಫೆಬ್ರುವರಿ 2012, 6:10 IST

ಹುಣಸೂರು: ತಾಲ್ಲೂಕಿನ ಗಡಿಯಂಚಿನ ಹುಂಡಿಮಾಳ ಗ್ರಾಮದಲ್ಲಿ ಮೂಲಸೌಲಭ್ಯಗಳಿಲ್ಲ. ಗ್ರಾಮ ಸಂಪರ್ಕಿ ಸುವ ರಸ್ತೆ ಹೊರತುಪಡಿಸಿ ಉಳಿದ ರಸ್ತೆಗಳು ತೀರಾ ಕಳಪೆಯಾಗಿವೆ. ತಾಲ್ಲೂಕಿಗೆ ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದಿದ್ದರೂ ಈ ಗ್ರಾಮಕ್ಕೆ ತಲುಪುವುದು ಬಲು ದೂರವಾಗಿದೆ.
 
ಗ್ರಾಮದೊಳಗಿನ ರಸ್ತೆಗಳು ಯಾವುವು ರಸ್ತೆಯ ಸ್ವರೂಪವನ್ನು ಹೊಂದಿಲ್ಲ. ಗ್ರಾಮಸ್ಥರೇ ಸ್ವಇಚ್ಛೆಯಿಂದ ರಸ್ತೆಗೆ ಸ್ಥಳ ಬಿಟ್ಟು ಮನೆ ನಿರ್ಮಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಗೆ ಬರುವ ಅನುದಾನವಾಗಲಿ ಅಥವಾ ಸುವರ್ಣ ಗ್ರಾಮ ಯೋಜನೆಯಾಗಲಿ ಈ ಗ್ರಾಮದತ್ತ ಸುಳಿದಿಲ್ಲ ಎನ್ನುತ್ತಾರೆ ಸ್ಥಳಿಯರು.

ಗ್ರಾಮದಲ್ಲಿ ಬಹುತೇಕ ತಮಿಳಿಗರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ ಪ್ರತಿಯೊಂದು  ಕ್ಷೇತ್ರದಲ್ಲಿ ತಮಿಳು ಸಂಸ್ಕೃತಿ ತುಂಬಿದ್ದು, ಇಲ್ಲಿಯ ನಾಗರಿಕರು ಬಲು ಶ್ರಮ ಜೀವಿಗಳು. ಗ್ರಾಮದಲ್ಲಿ ಕನ್ನಡ ಶಾಲೆಯಿದ್ದು, ಮಕ್ಕಳ ಸಂಖ್ಯೆ ಹೇಳಿಕೊಳ್ಳುವಷ್ಟಿಲ್ಲ್ದ್ದದರೂ ಮುಚ್ಚುವ ಭಯದಿಂದ ಪಾರಾದ ನೆಮ್ಮದಿ ಸ್ಥಳಿಯರದ್ದು.

ಗ್ರಾಮ ಸಂಪರ್ಕಿಸುವ ರಸ್ತೆಯ ಎರಡೂ ಬದಿಯಲ್ಲೂ ಚರಂಡಿ ನಿರ್ಮಿಸಲಾಗಿದೆ. ಆದರೆ ಚರಂಡಿ ತುಂಬಾ ಹೂಳು ತುಂಬಿಕೊಂಡಿದ್ದು ನೀರು ಹರಿಯುವ ಪ್ರಶ್ನೆ ಇಲ್ಲ. ಈ ಮಧ್ಯೆ ಕೆಲವು ಪ್ರಭಾವಿ ವ್ಯಕ್ತಿಗಳು ಚರಂಡಿಯನ್ನೇ ಮುಚ್ಚಿಕೊಂಡಿದ್ದು, ಕೆಲವರು ಅವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದಾರೆ.

ಗ್ರಾಮದಲ್ಲಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕ್ ಇದ್ದರೂ ನೀರಿನ ಬವಣೆ ಹೇಳತೀರದು. ನೀರಿನ ವಿಚಾರದಲ್ಲಿ ಗ್ರಾಮಸ್ಥರು ಎರಡು ಭಾಗವಾಗಿ ಹೋರಾಡುತ್ತಿದ್ದಾರೆ. ಗ್ರಾಮದ ತಗ್ಗು ಪ್ರದೇಶಕ್ಕೆ ನೀರು ಸಮೃದ್ಧಿಯಾಗಿ ಬರುತ್ತಿದ್ದು, ಎತ್ತರ ಪ್ರದೇಶದ ನಿವಾಸಿಗಳಿಗೆ ನೀರು ಬರುತ್ತಿಲ್ಲ. ಇದರಿಂದಾಗಿ ಅಲ್ಲಿನ ನಿವಾಸಿಗಳು ಕೊಳವೆ ಬಾವಿ ಆಶ್ರಯಿಸಬೇಕಾಗಿದೆ.

ಮದ್ಯ ನಿಲ್ಲಿಸಿ 
 ಹುಂಡಿಮಾಳ ಗ್ರಾಮ ಬಿಳಿಕೆರೆ ಹೋಬಳಿ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಿಂದ ಬಹಳ ದೂರದಲ್ಲಿದ್ದು, ಈ ಭಾಗದ ಪಾನ ಪ್ರಿಯರಿಗೆ ಮದ್ಯದಂಗಡಿ ಇಲ್ಲದಿದ್ದರೂ ಮದ್ಯ ನಿರಂತರವಾಗಿ ಹರಿಯುತ್ತಿದೆ.  ಗ್ರಾಮದ ಕೆಲವು ಮನೆಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ಈ ವಿಚಾರಕ್ಕೆ ಅನೇಕ ಬಾರಿ ಗ್ರಾಮದಲ್ಲಿ ಮಹಿಳಾ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ. ಆದರೂ ಈ ಸಮಸ್ಯೆಯಿಂದ ಗ್ರಾಮ ಮುಕ್ತವಾಗಿಲ್ಲ ಎಂಬುದು ಸ್ಥಳಿಯ ನಾಗರಿಕರ ಆರೋಪ.

ಜನಪ್ರತಿನಿಧಿಗಳು ಹುಂಡಿಮಾಳ ಗ್ರಾಮಕ್ಕೆ ಆಗೊಮ್ಮೆ  ಈಗೊಮ್ಮೆ ಭೇಟಿ ನೀಡಿ ಭರವಸೆ ನೀಡಿ ಹೋಗುವರು. ಆದರೆ ಗ್ರಾಮದ ಮೂಲ ಸಮಸ್ಯೆ ನೀಗಿಸಲು ಈವರಗೆ ಯಾರೂ ಪರಿಪೂರ್ಣವಾಗಿ ಸ್ಪಂದಿಸಿಲ್ಲ ಎಂಬ ಕೂಗು ಗ್ರಾಮದಲ್ಲಿ ಕೇಳಿ ಬರುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.