ADVERTISEMENT

ಹುಣಸೂರಿನಲ್ಲಿ ಶಾಂತಿ ಸ್ಥಾಪನೆಗೆ ಬದ್ಧ; ಎಸ್ಪಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 5:06 IST
Last Updated 3 ಡಿಸೆಂಬರ್ 2017, 5:06 IST
ರವಿ ಚನ್ನಣ್ಣನವರ
ರವಿ ಚನ್ನಣ್ಣನವರ   

ಹುಣಸೂರು: ನಗರದಲ್ಲಿ ಶಾಂತಿ, ಸೌಹಾರ್ದ ಸ್ಥಾಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಡಿ.5ರಂದು ಸರ್ವ ಪಕ್ಷಗಳು ಹಾಗೂ ಎರಡೂ ಕೋಮಿನ ಮುಖಂಡರ ಸಭೆ ನಡೆಸಿ ಶಾಂತಿಯುತವಾಗಿ ಹಬ್ಬ ಆಚರಿಸುವ ಸೂತ್ರ ಕಂಡು ಹಿಡಿಯಲಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಹೇಳಿದರು. ಇಲ್ಲಿ ಹನುಮ ಜಯಂತಿ ಹಾಗೂ ಈದ್ ಮಿಲಾದ್‌ ಸಮಯದಲ್ಲಿ ಮಾತ್ರ ಕೋಮು ಸಂಘರ್ಷದ ಬೆಂಕಿ ಹೊತ್ತುತ್ತಿದೆ.

ಉಳಿದ ಸಮಯದಲ್ಲಿ ಆಶಾಂತಿ ಉಲ್ಬಣವಾಗುತ್ತಿಲ್ಲ. ಈ ಸಂಬಂಧ ಎರಡೂ ಕೋಮುಗಳ ಮುಖಂಡರೊಂದಿಗೆ ಸಮನ್ವಯ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಇಚ್ಚಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಭೆಗೆ ಜನಪ್ರತಿನಿಧಿಗಳು ಹಾಗೂ ಎರಡೂ ಕೋಮಿನ ಮುಖಂಡರಿಗೆ ಆಹ್ವಾನಿಸಲಾಗಿದೆ. ಕೋಮು ಘರ್ಷಣೆಗೆ ಅಂತ್ಯ ಹಾಡುವ ತೀರ್ಮಾನ ತೆಗೆದುಕೊಂಡು ಹುಣಸೂರಿನಲ್ಲಿ ದಶಕದ ಹಿಂದೆ ಇದ್ದಂತಹ ಶಾಂತಿ ಸ್ಥಾಪಿಸಿ ಸೌಹಾರ್ದತೆಯಿಂದ ಹಬ್ಬ ಆಚರಿಸುವ ವಾತಾವರಣ ನಿರ್ಮಾಣ ಮಾಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು.

ADVERTISEMENT

ಶಾಂತಿಯುತ ಹಬ್ಬ ಆಚರಣೆಯಿಂದ ಮನಸ್ಸಿಗೆ ಮುದ ಸಿಗುತ್ತದೆ. ಪೊಲೀಸ್‌ ಭದ್ರತೆ, ನಿರ್ಬಂಧನೆಯಲ್ಲಿ ಹಬ್ಬ ಆಚರಿಸುವುದರಿಂದ ಮನಶಾಂತಿ ಸಿಗುವುದಿಲ್ಲ ಎಂದರು. ಭದ್ರತೆ ದೃಷ್ಟಿಯಿಂದ ಕಳೆದ ಮೂರು ವರ್ಷದಿಂದ ಕೆಲ ರಸ್ತೆಗಳಲ್ಲಿ ಮೆರವಣಿಗೆ ನಿರ್ಬಂಧಿಸಲಾಗಿದೆ. ಈ ರಸ್ತೆಗಳಲ್ಲಿ ತೆರಳುವುದರಿಂದ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ.

ಈ ಬಗ್ಗೆ ಕೆಲವರು ಇಲಾಖೆಗೆ ಅಭಿಪ್ರಾಯ ತಿಳಿಸಿದ್ದಾರೆ. ಸಭೆಯಲ್ಲಿ ರಸ್ತೆ ನಿರ್ಬಂಧ ಕುರಿತು ಚರ್ಚಿಸಿ ತೆರವುಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

* * 

ಹುಣಸೂರು ಕೋಮು ಸಂಘರ್ಷಮುಕ್ತ ನಗರವಾಗಿ ಪರಿವರ್ತಿಸಿ ವರ್ಗಾವಣೆ ಆಗಬೇಕೆಂಬ ಆಸೆ ಇದೆ. ಇದಕ್ಕೆ ಜನರು ಸಹಕರಿಸುತ್ತಾರೆಂಬ ವಿಶ್ವಾಸ ಇದೆ
ರವಿ ಡಿ.ಚನ್ನಣ್ಣನವರ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.