ADVERTISEMENT

‘ಉತ್ತಮ ಸಾಹಿತ್ಯಕ್ಕೆ ನಿರಂತರ ಕಲಿಕೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 10:27 IST
Last Updated 26 ಸೆಪ್ಟೆಂಬರ್ 2013, 10:27 IST

ಯಳಂದೂರು: ವಿದ್ಯಾರ್ಥಿಗಳು ಸಾಹಿತ್ಯದ ಕಲಿಕೆಯನ್ನು ನಿರಂತರವಾಗಿ ಇಟ್ಟುಕೊಂಡರೆ, ಉತ್ತಮ ಸಾಹಿತ್ಯ ರೂಪುಗಳ್ಳಲು ಸಾಧ್ಯವಾಗುತ್ತದೆ ಎಂದು ವೈಎಂಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಥಿಯೋಡರ್‌ ಲೂಥರ್‌ ತಿಳಿಸಿದರು.

ಅವರು ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಕಾವ್ಯ ಕಮ್ಮಟ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವ್ಯಕ್ತಿಗೂ ಭಾವನೆ ಇದ್ದೇ ಇರುತ್ತದೆ. ಅದನ್ನು ಅಭಿವ್ಯಕ್ತಗೊಳಿಸುವ ಕಲೆಯನ್ನು ಕರಗತ ಮಾಡಿಕೊಂಡಾಗ ಉತ್ತಮ ಸಾಹಿತ್ಯ ರೂಪುಗೊಳ್ಳುತ್ತದೆ. ಕಾವ್ಯ ಕಟ್ಟುವುದಲ್ಲ, ಮನಸ್ಸಿನಿಂದ ಹುಟ್ಟಬೇಕು ಇದಕ್ಕೆ ಬೇಕಾಗುವ ಕಲೆಯನ್ನು ರೂಢಿಸಿಕೊಳ್ಳಬೇಕು. ತಾನು ರಚಿಸಿದ ಲೇಖನಗಳನ್ನು ನಿರಂತರ ಓದುವಿಕೆ ಹಾಗೂ ತಿದ್ದುವಿಕೆಯ ಮೂಲಕ ರಚನೆಯಲ್ಲಿ ತೊಡಗಿದಾಗ ಕಾವ್ಯಕ್ಕೆ ಚಿರಯವ್ವನ ಬರುತ್ತದೆ. ಹಾಗಾಗಿ ಪ್ರತಿ ವಿದ್ಯಾರ್ಥಿಯು ಉತ್ತಮ ಸಾಹಿತ್ಯ ಓದುವ, ಗ್ರಹಿಸುವ ಸಾಮಾರ್ಥ್ಯ, ಸಂಯಮ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕವಿ ಪಿ. ನಾಗೇಂದ್ರ ಮಾತನಾಡಿ, ಕಾವ್ಯ ರಚನೆಯಲ್ಲಿ ವಿಷಯ ಕಟ್ಟುವಿಕೆಯಲ್ಲಿ ಕೆಲವು ಅಂಶಗಳನ್ನು ತಿಳಿದುಕೊಳ್ಳಬೇಕು. ಯುವ ಉತ್ಸಾಹಿ ಕವಿಗಳನ್ನು ಸಿದ್ಧಪಡಿಸುವ ವೇದಿಕೆಗಳು ಹೆಚ್ಚಾಗಬೇಕು. ಇಂತಹ ಕಾರ್ಯಗಳಿಗೆ ಸಾಹಿತ್ಯ ಪರಿಷತ್ತು ಮತ್ತಷ್ಟು ಚುರುಕುಗೊಳ್ಳಬೇಕು ಎಂದರು.

ಪ್ರಾಂಶುಪಾಲ ಎಂ.ವಿ. ಪುಷ್ಪಕುಮಾರ್‌ ತಾಲ್ಲೂಕು ಕಸಾಪ ಅಧ್ಯಕ್ಷ ಮದ್ದೂರು ದೊರೆಸ್ವಾಮಿ ಮಾತನಾಡಿದರು. ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಹೆಚ್‌.ಎಸ್‌. ಪದ್ಮ, ಡಾ. ಶಿವರುದ್ರಪ್ಪ, ಕಸಾಪ ನಿಖಟ ಪೂರ್ವ ಅಧ್ಯಕ್ಷ ಮದ್ದೂರು ವಿರೂಪಾಕ್ಷ, ಕಾರ್ಯದರ್ಶಿಗಳಾದ ರವಿಕುಮಾರ್‌, ಫೈರೋಜ್‌ಖಾನ್‌, ಖಜಾಂಚಿ ಆರ್‌. ಗೋಪಾಲಕೃಷ್ಣ, ಸದಸ್ಯರಾದ ಯರಿಯೂರು ನಾಗೇಂದ್ರ ಉಪನ್ಯಾಸಕ ಗಣೇಶ್‌ ಪ್ರಸಾದ್‌, ನಾಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.