ಮೈಸೂರು: ಸ್ಥಳನಾಮಗಳ ಅಧ್ಯಯನ ವೊಂದರಿಂದಲೇ ‘ರಿಯಲ್ ಟಿಪ್ಪು’ ಏನೆಂದು ಗೊತ್ತಾಗುತ್ತದೆ ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ತಿಳಿಸಿದರು.
ಇಲ್ಲಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಡಾ.ಕೆ.ಪಿ. ಲಲಿತಾ (ರಶ್ಮಿ ನಂಜಪ್ಪ) ಅವರ ಮೂರು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಟಿಪ್ಪುವಿನ ನಿಜಸ್ವರೂಪ ಅರಿಯಲು ಯಾವುದೋ ಉನ್ನತಮಟ್ಟದ ಸಂಶೋಧನೆ ಬೇಕಿಲ್ಲ. ರಾಜ್ಯದ ಸ್ಥಳನಾಮಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿದರೆ ಆತನ ನಿಜಸ್ವರೂಪ ತಿಳಿಯುತ್ತದೆ ಎಂದು ಅವರು ವಿಶ್ಲೇಷಿಸಿದರು.
ಸಾಹಿತಿಗಳು ಸಾಹಿತ್ಯ ಬರೆಯುವು ದನ್ನು ಬಿಟ್ಟು ತಮಗೆ ಗೊತ್ತಿಲ್ಲದ ವಿಚಾರ ಮಾತನಾಡುವುದರಿಂದಲೇ ಟಿಪ್ಪು ಪರಮತ ಸಹಿಷ್ಣು ಎಂಬ ಭಾವನೆ ಬರುವಂತಾಗಿದೆ. ಸ್ಥಳನಾಮಗಳನ್ನು ಕುರಿತು ಅಧ್ಯಯನ ಮಾಡಿದರೆ ಆತ ಬಹಳಷ್ಟು ಊರುಗಳ ಹೆಸರುಗಳನ್ನು ಬದಲಿಸಿದ ವಿವರ ಗೊತ್ತಾಗುತ್ತದೆ ಎಂದು ಅವರು ವಿವರಿಸಿದರು.
ಮೈಸೂರಿಗೆ ನಜರ್‌ಬಾದ್, ಬ್ರಹ್ಮಪುರಿಗೆ ಸುಲ್ತಾನ್ ಪೇಟೆ, ಕಾಳಿಕೋಟೆ (ಕಲ್ಲಿಕೋಟೆ)ಗೆ ಫರೂಕಬಾದ್, ದೇವನಹಳ್ಳಿಗೆ ಯೂಸೂಫಬಾದ್ ಎಂದು ಹಲವು ಸ್ಥಳಗಳ ಹೆಸರುಗಳನ್ನು ಬದಲಿಸಿದ. ಅದೃಷ್ಟವಶಾತ್ ಆತನ ನಂತರ ರಾಜವಂಶಸ್ಥರಿಗೆ ಮರಳಿ ಮೈಸೂರು ರಾಜ್ಯದ ಅಧಿಕಾರ ಸಿಕ್ಕಿತು. ಹಾಗಾಗಿ, ಮೂಲಹೆಸರುಗಳನ್ನು ಅವರು ಉಳಿಸಿಕೊಂಡರು ಎಂದು ತಿಳಿಸಿದರು.
ದೇಸಿ ಹೆಸರುಗಳ ಕುರಿತು ಕೀಳರಿಮೆ ಸಲ್ಲ: ‘ನಗರದ ಪಡುವಾರಹಳ್ಳಿಗೆ ವಿನಾಯಕನಗರ ಹಾಗೂ ಕನ್ನೇಗೌಡನ ಕೊಪ್ಪಲಿಗೆ ಕೆ.ಜಿ.ಕೊಪ್ಪಲು ಎಂದು ಕರೆಯುತ್ತಾರೆ. ನಮ್ಮ ದೇಸಿ ಹೆಸರುಗಳನ್ನು ಕುರಿತು ಕೀಳರಿಮೆ ಇರಬಾರದು. ಆ ಹೆಸರುಗಳನ್ನು ನಾವೇ ರಕ್ಷಿಸದೆ ಹೋದರೆ ಮತ್ತಾರು ರಕ್ಷಿಸುತ್ತಾರೆ’ ಎಂದು ಪ್ರಶ್ನಿಸಿದರು.
ಬೆಂಗಳೂರಿನ ಅಶ್ವಥನಗರವನ್ನು ಮುಖ್ಯಮಂತ್ರಿಯೊಬ್ಬರು ಸಂಜಯನಗರ ಎಂದು ಬದಲಿಸಿದರು. ಏಕೆ ಬದಲಾಯಿಸಿದರು ಎಂದು ಅಧ್ಯಯನ ನಡೆಸಿದರೆ ಆ ಮುಖ್ಯಮಂತ್ರಿ ಇದರಿಂದ ಅವರು ಪಡೆದ ಲಾಭದ ಕುರಿತು ಗೊತ್ತಾಗುತ್ತದೆ. ಹೀಗೆ, ಈಗಿನ ಕಾಲದಲ್ಲೂ ಸ್ಥಳನಾಮಗಳನ್ನು ಬದಲಿಸುವ ಪ್ರವೃತ್ತಿ ಮುಂದುವರಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಮಾಯಣ, ಮಹಾಭಾರತಗಳು ಒಗ್ಗಟ್ಟಿಗೆ ಕಾರಣ: ಬ್ರಿಟಿಷರ ನೀತಿ, ಅವರು ಕಲ್ಪಿಸಿದ ರೈಲು ಸಂಪರ್ಕ, ದೇಶದ ಸಂವಿಧಾನಗಳು ಒಗ್ಗಟ್ಟಿಗೆ ಕಾರಣ ಎಂದು ಹಲವರು ಹೇಳುವುದರಲ್ಲಿ ಯಾವುದೇ ಹುರುಳಿಲ್ಲ. ಇವೆಲ್ಲಕ್ಕೂ ಸಾವಿರಾರು ವರ್ಷಗಳಷ್ಟು ಹಿಂದೆಯೇ ಭಾರತದಲ್ಲಿ ರಾಮಾಯಣ ಹಾಗೂ ಮಹಾಭಾರತಗಳು ಜನರನ್ನು ಒಂದುಗೂಡಿಸಿದ್ದವು.
ದೇಶದ ಯಾವುದೇ ಊರಿಗೆ ಹೋದರೂ ಅಲ್ಲಿ ಈ ಮಹಾಕಾವ್ಯಗಳನ್ನು ಸಂಪರ್ಕಿಸುವ ಒಂದೊಂದು ಹೆಸರುಗಳು, ಸ್ಥಳನಾಮಗಳು, ಕಥೆಗಳು ದೊರಕುತ್ತವೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.