ADVERTISEMENT

1.16 ಲಕ್ಷ ಹೊಸ ಪಡಿತರ ಚೀಟಿ ವಿತರಣೆ

ಮೈಸೂರು: ತಿಂಗಳಿಗೆ ಸರಾಸರಿ 10 ಸಾವಿರ ಪಡಿತರ ಚೀಟಿ ವಿತರಣೆ ಗುರಿ

ಮಹಮ್ಮದ್ ನೂಮಾನ್
Published 4 ಜೂನ್ 2018, 11:09 IST
Last Updated 4 ಜೂನ್ 2018, 11:09 IST

ಮೈಸೂರು: ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ಟೀಕೆ, ದೂರುಗಳ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿ ವಿತರಣೆಯ ವೇಗವನ್ನು ಹೆಚ್ಚಿಸಿಕೊಂಡಿದೆ.

ಮೈಸೂರು ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ 10 ಸಾವಿರ ಪಡಿತರ ಚೀಟಿ ವಿತರಿಸುವ ಗುರಿಯನ್ನು ಹಾಕಿಕೊಂಡಿದೆ. 2017ರ ಜನವರಿಯಿಂದ 2018ರ ಮೇ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 1.53 ಲಕ್ಷ ಮಂದಿ ಹೊಸದಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 4,600 ಮಂದಿ ತಮ್ಮ ಅರ್ಜಿಯನ್ನು ವಾಪಸ್‌ ಪಡೆದುಕೊಂಡಿದ್ದಾರೆ. 1.16 ಲಕ್ಷ ಮಂದಿಯ ಮನೆ ಬಾಗಿಲಿಗೆ ಪಡಿತರ ಚೀಟಿ ತಲುಪಿಸಲಾಗಿದೆ ಎಂಬುದನ್ನು ಆಹಾರ ಇಲಾಖೆಯ ಅಂಕಿ–ಅಂಶಗಳು ತಿಳಿಸುತ್ತವೆ.

2017ರ ಜನವರಿಯಿಂದ ಮೇ ತಿಂಗಳವರೆಗೆ ಸುಮಾರು 80 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರೆ, ಸುಮಾರು 700 ಮಂದಿಗೆ ಮಾತ್ರ ಪಡಿತರ ಚೀಟಿ ವಿತರಣೆ ನಡೆದಿತ್ತು. ಇಲಾಖೆಯ ನಿಧಾನಗತಿ ಧೋರಣೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಅರ್ಜಿಗಳ ಪರಿಶೀಲನೆ ಮತ್ತು ಪಡಿತರ ಚೀಟಿ ವಿತರಣೆ ಕೆಲಸವನ್ನು ತ್ವರಿತವಾಗಿ ನಡೆಸುತ್ತಿದ್ದಾರೆ. ಈ ವರ್ಷದ ಫೆಬ್ರುವರಿ ವೇಳೆಗೆ 86 ಸಾವಿರ ಪಡಿತರ ಚೀಟಿಗಳನ್ನು ವಿತರಿಸಲಾಗಿತ್ತು. ಫೆಬ್ರುವರಿಯಿಂದ ಮೇ ತಿಂಗಳವರೆಗೆ 30 ಸಾವಿರಕ್ಕೂ ಅಧಿಕ ಪಡಿತರ ಚೀಟಿಗಳು ಗ್ರಾಹಕರ ಮನೆ ಬಾಗಿಲಿಗೆ ತಲುಪಿವೆ. ಅಂದರೆ ತಿಂಗಳಿಗೆ ಸರಾಸರಿ 10 ಸಾವಿರ ಪಡಿತರ ಚೀಟಿಗಳ ವಿತರಣೆ ನಡೆದಿದೆ.

ADVERTISEMENT

ಬಾಕಿಯುಳಿದಿರುವ 37 ಸಾವಿರ ಅರ್ಜಿಗಳಲ್ಲಿ ಹೆಚ್ಚಿನ ಅರ್ಜಿಗಳ ಪರಿಶೀಲನೆ ಕೆಲಸ ನಡೆದಿದ್ದು, ಕೆಲವು ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಂಟೇಸ್ವಾಮಿ ತಿಳಿಸಿದ್ದಾರೆ.

ಇನ್ನುಳಿದ ಪಡಿತರ ಚೀಟಿಗಳನ್ನು ಶೀಘ್ರದಲ್ಲಿ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ತಾಂತ್ರಿಕ ಕಾರಣಗಳೂ ಸೇರಿದಂತೆ ಕೆಲವು ಕಾರಣಗಳಿಂದ ವಿತರಣೆ ಕೆಲಸ ತಡವಾಗುತ್ತಿದೆ. ಆದ್ದರಿಂದ ಬಾಕಿ ಉಳಿದಿರುವ ಪಡಿತರ ಚೀಟಿಗಳ ವಿತರಣೆಗೆ ನಿರ್ದಿಷ್ಟ ಗಡುವು ನಿಗದಿಪಡಿಸುವುದು ಕಷ್ಟ ಎಂದರು.

ಹೊಸದಾಗಿ ಸಲ್ಲಿಸುವ ಅರ್ಜಿಯಲ್ಲಿ ಯಾವುದೇ ಲೋಪವಿಲ್ಲದಿದ್ದರೆ, ಪರಿಶೀಲನೆ ಮತ್ತು ಅನುಮತಿ ನೀಡುವ ಪ್ರಕ್ರಿಯೆ ಕೇವಲ ಅರ್ಧ ಗಂಟೆಯಲ್ಲಿ ಕೊನೆಗೊಳ್ಳುತ್ತದೆ. ಆದರೆ ಪಡಿತರ ಚೀಟಿ ಮುದ್ರಣಗೊಂಡು ಗ್ರಾಹಕರ ಮನೆ ಬಾಗಿಲಿಗೆ ಬರುವುದು ತಡವಾಗುತ್ತದೆ. ಪಡಿತರ ಚೀಟಿಗಳು ಮಣಿಪಾಲದಲ್ಲಿ ಮುದ್ರಣಗೊಳ್ಳುವುದು ಇದಕ್ಕೆ ಒಂದು ಕಾರಣ ಎಂದು ಹೇಳಿದರು.

ಪಡಿತರ ಚೀಟಿ ಪಡೆಯಲು ಕಚೇರಿಗೆ ಅಲೆದಾಟ ತಪ್ಪಿಸುವುದಕ್ಕಾಗಿ ಮನೆಬಾಗಿಲಿಗೆ ತಲುಪಿಸುವ ನಿರ್ಧಾರವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕಳೆದ ವರ್ಷ ತೆಗೆದುಕೊಂಡಿತ್ತು. ಕಳೆದ ಒಂದೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಮೈಸೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅರ್ಜಿಗಳು ಬಂದಿದ್ದು, ಇದೇ ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿತರಣೆ ಕೂಡಾ ನಡೆದಿದೆ. ತಾಲ್ಲೂಕಿನ 62,162 ಅರ್ಜಿಗಳಲ್ಲಿ 50,422 ಮಂದಿಗೆ ಪಡಿತರ ಚೀಟಿ ತಲುಪಿಸಲಾಗಿದೆ. ಕೆ.ಆರ್‌.ನಗರ ತಾಲ್ಲೂಕಿನಲ್ಲಿ ಅತಿಕಡಿಮೆ ಆನ್‌ಲೈನ್‌ ಅರ್ಜಿಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.