ಹುಣಸೂರು: ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಮತ್ತು ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಹನಗೋಡು ಮತ್ತು ಕಸಬ ಹೋಬಳಿಯಲ್ಲಿ ಅನಾಹುತ ಸಂಭವಿಸಿದೆ.
ಬುಧವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಕೆಲವೊಂದು ಅನಾಹುತ ವರುಣ ಸೃಷ್ಠಿಸಿದ್ದು ಗುರುವಾರ ಬೆಳಕಿಗೆ ಬಂದಿದೆ. ಹನಗೋಡು ಹೋಬಳಿ ಹೊಸೂರು ಗೇಟ್ ಗ್ರಾಮದಲ್ಲಿ ಗೋವಿಂದಯ್ಯ ಅವರಿಗೆ ಸೇರಿದ ಮಂಗಳೂರು ಹಂಚಿನ ಮನೆ ಭಾಗಷಃ ಹಾನಿಯಾಗಿದ್ದು, ಯಶೋಧಪುರ ಗ್ರಾಮದಲ್ಲಿ ನಾಗಮ್ಮ ಅವರಿಗೆ ಸೇರಿದ ಮನೆಯ ಛಾವಣಿ ಭಾರಿ ಗಾಳಿಗೆ ಹಾರಿ ಹೋಗಿದೆ.
ನಾಗಮ್ಮ ಮನೆ ಛಾವಣಿ ಹಾರಿ ಹೋಗಲಾಗಿ ಮನೆಯಲ್ಲಿದ್ದ ಪಡಿತರ ಸೇರಿದಂತೆ ಬಹುತೇಕ ಎಲ್ಲಾ ಪದಾರ್ಥಗಳು ಮಳೆಯಿಂದ ನಾಶವಾಗಿದೆ. ನಾಗಮ್ಮ ಪ್ರಜಾವಾಣಿಗೆ ಮಾತನಾಡಿ, ಕೂಲಿ ಕಾರ್ಮಿಕರಾಗಿದ್ದು, ಬುಧವಾರ ಬಿದ್ದ ಭಾರಿ ಮಳೆ ಗಾಳಿಗೆ ಹೆಂಚಿನ ಮನೆ ಛಾವಣಿ ಸಂಪೂರ್ಣ ಗಾಳಿಗೆ ಹಾರಿ ಹೋಗಿದೆ. ಮನೆಯಲ್ಲಿ ಆ ಸಮಯ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಆಗಿಲ್ಲ. ಆದರೆ ಜೀವನೋಪಾಯಕ್ಕೆ ಸಂಗ್ರಹಿಸಿದ್ದ ಪಡಿತರ ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ಮಳೆಗೆ ಹಾನಿಯಾಗಿದೆ. ಸರ್ಕಾರ ಪ್ರಕೃತಿ ವಿಕೋಪದಲ್ಲಿ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಸ್ಥಳಕ್ಕೆ ಹನಗೋಡು ಹೋಬಳಿ ರಾಜಸ್ವ ನಿರೀಕ್ಷಣಾಧಿಕಾರಿ ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು.
ಕಸಬಾ ಹೋಬಳಿಯ ಆಸ್ಪತ್ರೆ ಕಾವಲ್ ಗ್ರಾಮದ ಪ್ರಗತಿಪರ ರೈತ ವಿಠಲ್ ರಾವ್ ಕರಾಡೆ ಅವರಿಗೆ ಸೇರಿದ ಒಂದು ಎಕರೆ ಬಾಳೆ ಸಂಪೂರ್ಣ ನೆಲಕಚ್ಚಿದ್ದು, ಈ ಘಟನೆಯಿಂದಾಗಿ ರೈತನಿಗೆ ಅಂದಾಜು 30 ರಿಂದ 40 ಸಾವಿರ ನಷ್ಟವಾಗಿದೆ ಎಂದು ತಿಳಿಸಿದರು.
ಮಳೆ ವಿವರಣೆ:
ತಾಲ್ಲೂಕಿನ 7 ಮಳೆ ಮತ್ತು ಬಿಸಿಲು ಮಾಪನ ಕೇಂದ್ರಗಳಲ್ಲಿ 3 ಕೇಂದ್ರ ಶಿಥಿಲಗೊಂಡಿದ್ದು ಉಳಿದ 4 ಕೇಂದ್ರದಿಂದ ಒಟ್ಟು 124.4 ಮಿ.ಮಿ. ಮಳೆಯಾಗಿರುವುದು ದಾಖಲಾಗಿದೆ ಎಂದು ಸಾಂಕಿಕ ನಿರೀಕ್ಷಣಾಧಿಕಾರಿ ಚಂದ್ರಶೇಖರ್ ತಿಳಿಸಿದರು.
ಹುಣಸೂರು ನಗರದ ತಂಬಾಕು ಸಂಶೋಧನ ಕೇಂದ್ರದಲ್ಲಿ 36.60 ಮಿ.ಮಿ. ಹಾರಂಗಿ ನೀರಾವರಿ ಕಚೇರಿ 37.04 ಮಿ.ಮಿ. ಚಿಲ್ಕುಂದ 28.20 ಮಿ.ಮಿ. ಮತ್ತು ಬಿಳಿಕೆರೆ 21.20 ಮಿ.ಮಿ. ಮಳೆಯಾಗಿದೆ. ರತ್ನಾಪುರಿ, ಉಂಡುವಾಡಿ ಮತ್ತು ಹೈರಿಗೆ ಕೇಂದ್ರಗಳು ಸ್ಥಗಿತವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.