ADVERTISEMENT

ಜಿಲ್ಲೆಯಲ್ಲಿ ಶೇ 19 ಮಳೆ ಕೊರತೆ, ರೈತರ ನಿರೀಕ್ಷೆ ಹುಸಿಗೊಳಿಸಿದ ಪೂರ್ವ ಮುಂಗಾರು

ಮಹಮ್ಮದ್ ನೂಮಾನ್
Published 19 ಮೇ 2019, 11:00 IST
Last Updated 19 ಮೇ 2019, 11:00 IST

ಮೈಸೂರು: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದ್ದು, ಕೃಷಿ ಚಟುವಟಕೆಗಳಿಗೆ ಅಲ್ಪ ಹಿನ್ನಡೆಯಾಗಿದೆ. ಮೇ 15ರ ವರೆಗೆ ಶೇ 19 ರಷ್ಟು ಮಳೆ ಕೊರತೆ ಉಂಟಾಗಿದೆ.

ಜನವರಿಯಿಂದ ಮೇ 15ರ ವರೆಗೆ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ 140.3 ಮಿ.ಮೀ. ಆಗಿದೆ. ಆದರೆ ಈ ಬಾರಿ 113.9 ಮಿ.ಮೀ. ಮಳೆ ಬಿದ್ದಿದೆ ಎಂದು ಕೃಷಿ ಇಲಾಖೆ ಅಂಕಿ–ಅಂಶ ತಿಳಿಸುತ್ತದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. 2018ರ ಜನವರಿಯಿಂದ ಮೇ 15ರ ವರೆಗೆ 161.8 ಮಿ.ಮೀ. ಅಂದರೆ ವಾಡಿಕೆಗಿಂತ ಶೇ 15 ರಷ್ಟು ಅಧಿಕ ಮಳೆ ಬಿದ್ದಿತ್ತು. ಇದರಿಂದ ಪೂರ್ವ ಮುಂಗಾರು ಅವಧಿಯಲ್ಲೇ ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿತ್ತು.

ADVERTISEMENT

ಮೇ ತಿಂಗಳಲ್ಲಿ ಶೇ 27 ಕೊರತೆ: ಜಿಲ್ಲೆಯಲ್ಲಿ ತಿಂಗಳುವಾರು ಮಳೆಯ ಪ್ರಮಾಣವನ್ನು ಗಮನಿಸಿದಾಗ ಫೆಬ್ರುವರಿ ಹೊರತುಪಡಿಸಿ ಇನ್ನುಳಿದ ಎಲ್ಲ ತಿಂಗಳುಗಳಲ್ಲೂ ಮಳೆ ಕೊರತೆ ಉಂಟಾಗಿದೆ. ಫೆಬ್ರುವರಿಯ ವಾಡಿಕೆ ಮಳೆ 4.5 ಮಿ.ಮೀ. ಆಗಿದ್ದು, ಈ ಬಾರಿ 9.4 ಮಿ.ಮೀ. ಮಳೆಯಾಗಿತ್ತು.

ಮಾರ್ಚ್‌ನಲ್ಲಿ ಶೇ 90 ಹಾಗೂ ಏಪ್ರಿಲ್‌ನಲ್ಲಿ ಶೇ 5 ರಷ್ಟು ಕೊರತೆ ಉಂಟಾಗಿದೆ. ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ 38.2 ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ಕೇವಲ 1.2 ಮಿ.ಮೀ. ಮಳೆಯಾಗಿತ್ತು. ಮೇ ತಿಂಗಳಲ್ಲಿ 15ರ ವರೆಗೆ ಶೇ 27 ರಷ್ಟು ಕೊರತೆ ಕಂಡುಬಂದಿದೆ. ವಾಡಿಕೆಯಂತೆ 58.9 ಮಿ.ಮೀ ಮಳೆಯಾಗಬೇಕಿತ್ತು. ಆದರೆ 43.1 ಮಿ.ಮೀ ನಷ್ಟು ಮಳೆಯಾಗಿದೆ.

ಮೈಸೂರು ನಗರ ಒಳಗೊಂಡಂತೆ ಜಿಲ್ಲೆಯ ಕೆಲವೆಡೆ ಬುಧವಾರ ಮಳೆಯಾಗಿತ್ತು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಕೃಷಿ ಚಟುವಟಿಕೆಗಳಿಗೆ ಹಿನ್ನಡೆ: ಏಪ್ರಿಲ್‌, ಮೇ ತಿಂಗಳಲ್ಲಿ ವಾಡಿಕೆಯ ಮಳೆಯಾಗದೇ ಇದ್ದುದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ. ಮಳೆಯ ನಿರೀಕ್ಷೆಯೊಂದಿಗೆ ವಿವಿಧ ಬೆಳೆಗಳನ್ನು ನಾಟಿ ಮಾಡಿರುವ ರೈತರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಒಟ್ಟು ಶೇ 13 ರಷ್ಟು ಬಿತ್ತನೆ ಪೂರ್ಣಗೊಂಡಿದೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಎನಿಸಿರುವ ತಂಬಾಕು ಬಿತ್ತನೆ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. 63,700 ಹೆಕ್ಟೇರ್‌ ಬಿತ್ತನೆ ಗುರಿ ಇಡಲಾಗಿದ್ದು, ಕೇವಲ 670 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ನಡೆದಿದೆ.

ಜಿಲ್ಲೆಯಲ್ಲಿ ಬಹುತೇಕ ರೈತರು ಪೂರ್ವ ಮುಂಗಾರಿನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳಿಸುತ್ತಾರೆ. ಜೂನ್‌, ಜುಲೈನಲ್ಲಿ ವಾಡಿಕೆಯ ಮಳೆಯಾದರೆ ಉತ್ತಮ ಬೆಳೆ ಬರುತ್ತದೆ. ಆದರೆ ಈ ಬಾರಿ ಬಿತ್ತನೆ ಕಾರ್ಯ ವೇಗ ಪಡೆದುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.