ADVERTISEMENT

ಸೇವಾ ನ್ಯೂನತೆ: ಎಸ್‌ಬಿಐಗೆ ₹ 2 ಲಕ್ಷ ದಂಡ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಆದೇಶ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 12:57 IST
Last Updated 2 ಡಿಸೆಂಬರ್ 2022, 12:57 IST

ಮೈಸೂರು: ಸೇವಾ ನ್ಯೂನತೆ ಎಸಗಿದ ಇಲ್ಲಿನ ಸಯ್ಯಾಜಿರಾವ್ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಕೆಟ್‌ ಶಾಖೆ ಮತ್ತು ಅಶೋಕ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಒಟ್ಟು ₹ 2 ಲಕ್ಷ ದಂಡ ವಿಧಿಸಿ ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ವಿಶ್ವೇಶ್ವರ ನಗರ 2ನೇ ಹಂತದ ಸಿಐಟಿಬಿ ಕಾಲೊನಿಯ ಮಲ್ಲಿಗೆ ರಸ್ತೆಯ ನಿವಾಸಿ ರಾಮೋಜಿ ರಾವ್ ಅವರ ಪುತ್ರ ಕೃಷ್ಣೋಜಿ ರಾವ್ ಮನೆ ಖರೀದಿಗೆ ಮತ್ತು ನವೀಕರಿಸಲು 2003 ಹಾಗೂ 2013ರಲ್ಲಿ ಸಯ್ಯಾಜಿ ರಾವ್ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಾರ್ಕೆಟ್ ಬ್ರಾಂಚ್ ಹಾಗೂ ಅಶೋಕ ರಸ್ತೆಯ ಶಾಖೆಯಲ್ಲಿ ₹ 3.55 ಲಕ್ಷ ಮತ್ತು ₹ 6.40 ಲಕ್ಷ ಸಾಲ ಪಡೆದಿದ್ದರು. ಇದಕ್ಕಾಗಿ, ಮನೆಯ ಹಕ್ಕುಪತ್ರ, ಕ್ರಯಪತ್ರ ಹಾಗೂ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಬ್ಯಾಂಕ್‌ಗೆ ಭದ್ರತೆಯಾಗಿ ನೀಡಿದ್ದರು. ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನವಾಯಿತು.

ಸೇನೆಯಲ್ಲಿದ್ದ ಕೃಷ್ಣೋಜಿ ರಾವ್ 2021ರ ಜುಲೈ 31ರಂದು ನಿವೃತ್ತರಾದ ನಂತರ ದೊರೆತ ಹಣದ ಮೊತ್ತದಿಂದ 2021ರ ಆ.10ರಂದು ಬ್ಯಾಂಕ್‌ನಿಂದ ಪಡೆದ ಸಾಲವನ್ನು ಪೂರ್ತಿಯಾಗಿ ತೀರಿಸಿದ್ದರು. ಅವರಿಗೆ, ಎಸ್‌ಬಿಐ ಸಾಲ ತೀರುವಳಿ ಪತ್ರವನ್ನೂ ನೀಡಿತ್ತು.

ADVERTISEMENT

ಸಾಲ ಪಾವತಿಸಿದ್ದರಿಂದಾಗಿ, ತಾವು ಬ್ಯಾಂಕ್‌ಗೆ ಭದ್ರತೆಯಾಗಿ ನೀಡಿದ್ದ ತನ್ನ ಮನೆಯ ಹಕ್ಕುಪತ್ರ, ಕ್ರಯಪತ್ರ ಹಾಗೂ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಹಿಂದಿರುಗಿಸುವಂತೆ ಕೋರಿ ಕೃಷ್ಣೋಜಿ ರಾವ್ 2021ರ ಅ.26ರಂದು ಬ್ಯಾಂಕ್‌ಗೆ ಮನವಿ ಪತ್ರ ಸಲ್ಲಿಸಿದರು. ಆದರೆ, ಅವರಿಗೆ ಬ್ಯಾಂಕ್‌ನವರು ಮನೆಯ ದಾಖಲೆಗಳನ್ನು ವಾಪಸ್ ಮಾಡಿರಲಿಲ್ಲ.

ಇದರಿಂದ ನೊಂದ ಅವರು ದಾಖಲೆಗಳನ್ನು ಹಿಂದಿರುಗಿಸಲು ನಿರ್ದೇಶನ ನೀಡುವ ಜೊತೆಗೆ ಮನಸಿಕ ಹಿಂಸೆ ನೀಡಿ ಸೇವಾ ನ್ಯೂನತೆ ಎಸಗಿದ್ದಕ್ಕಾಗಿ ₹ 16 ಲಕ್ಷ ಖರ್ಚು ಸಹಿತ ಪರಿಹಾರ ಕೊಡಿಸುವಂತೆ ಕೋರಿ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯು ಈ ಎರಡೂ ಶಾಖೆಗಳು ಸೇವಾ ನ್ಯೂನತೆ ಎಸಗಿವೆ ಎಂದು ತೀರ್ಮಾನಿಸಿ, ದಾಖಲೆಗಳನ್ನು 2 ತಿಂಗಳೊಳಗೆ ಹಿಂದಿರುಗಿಸುವಂತೆ ಆದೇಶಿಸಿದೆ. ₹ 2 ಲಕ್ಷವನ್ನು ಪರಿಹಾರದ ರೂಪದಲ್ಲಿ ವಾರ್ಷಿಕ ಶೇ 6ರ ಬಡ್ಡಿಯೊಂದಿಗೆ ಪಾವತಿಸುವಂತೆ ನಿರ್ದೇಶಿಸಿದೆ. ಪ್ರಕರಣದ ಖರ್ಚಿನ ₹ 5ಸಾವಿರವನ್ನು 2 ತಿಂಗಳಲ್ಲಿ ಪಾವತಿಸುವಂತೆಯೂ ಆದೇಶಿದೆ. ಇದಕ್ಕೆ ತಪ್ಪಿದಲ್ಲಿ ₹ 2,05 ಲಕ್ಷಕ್ಕೆ ವಾರ್ಷಿಕ ಶೇ 10ರಷ್ಟು ಬಡ್ಡಿ ಕೊಡಬೇಕಾಗುತ್ತದೆ ಎಂದೂ ವೇದಿಕೆಯು ಎಚ್ಚರಿಕೆ ನೀಡಿದೆ.

ಕೃಷ್ಣೋಜಿ ರಾವ್ ಪರವಾಗಿ ವಕೀಲರಾದ ಪ್ರತಾಪ ರುದ್ರಮೂರ್ತಿ ಹಾಗೂ ಸುಂದರದಾಸ್.ಡಿ ವಕಾಲತ್ತು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.