ADVERTISEMENT

ಪ್ರತ್ಯೇಕ ಅಪಘಾತ; ಮೂವರ ಸಾವು

ಒಟ್ಟಿಗೆ ಮೃತಪಟ್ಟ ತಂದೆ, ಮಗ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 11:04 IST
Last Updated 9 ಡಿಸೆಂಬರ್ 2019, 11:04 IST

ಮೈಸೂರು: ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ.

ಪಡಿತರ ಚೀಟಿಗೆ ಬೆರಳಚ್ಚು ನೀಡಲೆಂದು ಸ್ಕೂಟರ್‌ನಲ್ಲಿ ಕಟ್ಟೆಹುಣಸೂರಿಗೆ ಹೋಗುತ್ತಿದ್ದ ತಂದೆ ಪ್ರಕಾಶ್ (50) ಹಾಗೂ ಅವರ ಪುತ್ರ ಸುರೇಶ್ (23) ಅವರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇವರು ಜೆ.ಪಿ.ನಗರದ ಮಹದೇವಪುರದಲ್ಲಿ ವಾಸವಿದ್ದರು. ಪ್ರತಿ ತಿಂಗಳು ಪಡಿತರವನ್ನು ಕಟ್ಟೆಹುಣಸೂರಿನಿಂದಲೇ ಪಡೆಯುತ್ತಿದ್ದರು. ಇದಕ್ಕಾಗಿ ಬೆರಳಚ್ಚು ಹಾಕಲು ತೆರಳುತ್ತಿದ್ದ ವೇಳೆ ಕೋಟೆಹುಂಡಿ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಯಾವುದೇ ಸೂಚನೆ ನೀಡದೆ ಬಲಕ್ಕೆ ತಿರುವು ತೆಗದುಕೊಂಡಿದೆ. ಇದರಿಂದ ಪಕ್ಕದಲ್ಲೇ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಇವರಿಗೆ ಬಸ್‌ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೃತರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಸಾವು: ಕೆ.ಆರ್.ನಗರ ತಾಲ್ಲೂಕಿನ ಮಂಚನಬೆಲೆಗೆ ಪತಿ ರಾಜೇಗೌಡ ಅವರ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಲ್ಲೂಕಿನ ಬೆಳತ್ತೂರು ಗ್ರಾಮದ ಶಿವಮ್ಮ ಅವರಿಗೆ ಆಟೊವೊಂದು ಹಿಂದಿನಿಂದ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಪ್ರಕರಣ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿದೆ.

ಕೆ.ಆರ್.ನಗರ: ಜೂಜಾಟದ ಮೇಲೆ ದಾಳಿ

ಕೆ.ಆರ್.ನಗರದ ಬಾಲಾಜಿ ಗ್ಯಾರೇಜ್ ಸಮೀಪ ಜೂಜಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹ 11,400 ಹಣವನ್ನು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ನಗರ ಸಿಪಿಐ ರಾಜು ಹಾಗೂ ಸಬ್‌ಇನ್‌ಸ್ಪೆಕ್ಟರ್ ಚೇತನ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಕಳವು ಆರೋಪಿ ಬಂಧನ

ಮೈಸೂರು: ಎಲೆಕ್ಟ್ರಿಕ್ ಕೇಬಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ ರಾಘವೇಂದ್ರ ಬಡಾವಣೆಯ ನಿವಾಸಿ ಸಾಗರ್ ಎಂಬಾತನನ್ನು ಆಲನಹಳ್ಳಿ ಪೊಲೀಸರು ಬಂಧಿಸಿ, ₹ 60 ಸಾವಿರ ಮೌಲ್ಯದ ಕೇಬಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಯರಗನಹಳ್ಳಿಯಲ್ಲಿ ಹೊಸದಾಗಿ ಕಟ್ಟುತ್ತಿದ್ದ ಮನೆಗೆ ಅಳವಡಿಸಲು ಮನೆಯ ಮುಂದೆ ಇಟ್ಟಿದ್ದ ಎಲೆಕ್ಟ್ರಿಕ್ ಕೇಬಲ್‌ಗಳನ್ನು ಡಿ.5 ರಂದು ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಲನಹಳ್ಳಿ ಇನ್‌ಸ್ಪೆಕ್ಟರ್ ಹರಿಯಪ್ಪ, ಎಎಸ್‌ಐ ಶ್ರೀಧರ್, ಸಿಬ್ಬಂದಿ ಚೌಡಪ್ಪ, ಶಿವಪ್ರಸಾದ್, ಮಾಣಿಕ್, ರವಿ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.