ADVERTISEMENT

‘ಪದವೀಧರರ ಸಂಖ್ಯೆ ಶೇ 40ಕ್ಕೆ ಏರಿಸುವ ಗುರಿ’

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಬಸವರಾಜ ರಾಯರಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 6:26 IST
Last Updated 14 ಜನವರಿ 2018, 6:26 IST
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಶನಿವಾರ ಮಾತನಾಡಿದರು
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಶನಿವಾರ ಮಾತನಾಡಿದರು   

ಸುತ್ತೂರು: ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಪದವೀಧರರ ಸಂಖ್ಯೆಯನ್ನು ಶೇ 40ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ ಇಲ್ಲಿ ಹೇಳಿದರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶನಿವಾರ ನಡೆದ ಮಾಹಿತಿ ಕೇಂದ್ರ, ವಸ್ತುಪ್ರದರ್ಶನ, ಕೃಷಿಮೇಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

17 ವರ್ಷಗಳ ಹಿಂದೆ ಶೇ 14ರಷ್ಟು ಇದ್ದ ಪದವೀಧರರ ಸಂಖ್ಯೆ ಈಗ ಶೇ 28ಕ್ಕೆ ಏರಿಕೆ ಆಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 16 ವಸತಿ (ರೆಸಿಡೆನ್ಷಿಯಲ್‌) ಕಾಲೇಜುಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ, ವಿದ್ಯಾರ್ಥಿನಿಯರಿಗೆ ಶುಲ್ಕ ರಹಿತ ಶಿಕ್ಷಣವನ್ನೂ ನೀಡಲಾಗುತ್ತಿದೆ. ಪದವೀಧರರ ಸಂಖ್ಯೆಯಲ್ಲಿ ಏರಿಕೆ ಆದರೆ ಸೇವಾ ವಲಯಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.

ADVERTISEMENT

ಮಠ ಪ್ರೇರಣೆ: ಕೇಂದ್ರ ಸಂಸದೀಯ ವ್ಯವಹಾರ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಮಾತನಾಡಿ, ‘ದೇಶದಲ್ಲಿ ರೈತಪರ, ಕಾರ್ಮಿಕ ಪರವಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸುತ್ತೂರು ಮಠ ಉದಾಹರಣೆಯೂ ಪ್ರೇರಣೆಯೂ ಆಗಿದೆ. ಸರ್ಕಾರದ ಕಾರ್ಯಕ್ರಮಗಳಿಗೂ ಮುನ್ನ ಹೊಸ ಪ್ರಯೋಗಗಳನ್ನು ಸುತ್ತೂರು ಮಠ ಅನುಷ್ಠಾನ ಮಾಡುತ್ತಿದೆ’ ಎಂದರು.

ಇಂಗ್ಲೆಂಡ್‌ನ ‘ಹೌಸ್‌ ಆಫ್‌ ಕಾಮನ್‌’ ಎಲ್ಲ ಸಂಸತ್‌ನ ತಾಯಿ ಎಂದು ಕರೆಯಲಾಗುತ್ತದೆ. ಆದರೆ, ಹೌಸ್‌ ಆಫ್‌ ಕಾಮನ್‌ನಲ್ಲೇ ಮಾತನಾಡುವ ಅವಕಾಶ ಸಿಕ್ಕಾಗ ‘ಬಸವಣ್ಣನವರು 12ನೇ ಶತಮಾನದಲ್ಲಿ ರೂಪಿಸಿದ ಅನುಭವ ಮಂಟಪವೇ ಎಲ್ಲ ಸಂಸತ್‌ನ ತಾಯಿ’ ಎಂದು ಹೇಳಿದ್ದೆ. ಜಾತೀಯತೆ ವಿರುದ್ಧ ಹೋರಾಡಿ ಸಮಾನತೆಯನ್ನು ಎತ್ತಿಹಿಡಿದ ಬಸವಣ್ಣ ಭಾರತದ ಸಾಮಾಜಿಕ ಆಂದೋಲನಕ್ಕೆ ದೀವಿಗೆಯಾಗಿದ್ದಾರೆ ಎಂದು ಬಣ್ಣಿಸಿದರು.

ವಸ್ತುಪ್ರದರ್ಶನವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಉದ್ಘಾಟಿಸಿದರು.

ಆಟೊಮೇಟಿವ್‌ ಆ್ಯಕ್ಸೆಲ್ಸ್‌ ಕಂಪೆನಿಯ ನಿರ್ದೇಶಕ ಡಾ.ಎನ್‌.ಮುತ್ತುಕುಮಾರ್‌, ತಿಪಟೂರು ಕೆರಗೋಡಿ–ರಂಗಾಪುರ ಸುಕ್ಷೇತ್ರದ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ, ಹಂಪಿ ವಿರೂಪಾಕ್ಷ ಮಹಾಸಂಸ್ಥಾನ ಮಠದ ಶಂಕರಾಚಾರ್ಯ ವಿದ್ಯಾರಣ್ಯ ಭಾರತೀಸ್ವಾಮೀಜಿ, ತೇಜಶ್ವಿನಿ ಅನಂತಕುಮಾರ್‌, ಮಾಜಿ ಶಾಸಕರಾದ ಎಸ್‌.ಎ.ರಾಮದಾಸ್‌, ನಂಜುಂಡಸ್ವಾಮಿ, ನಾಗೇಶ್‌, ಸಿ.ರಮೇಶ್‌, ರವಿಶಂಕರ್‌ ವೇದಿಕೆ ಮೇಲೆ ಇದ್ದರು.
***
‘ಕೆಮಿಕಲ್‌ ಮಾಫಿಯಾ’ ನನ್ನ ಬೆನ್ನು ಬಿದ್ದಿದೆ– ಅನಂತಕುಮಾರ್
ಸುತ್ತೂರು:
‘ಯೂರಿಯಾಕ್ಕೆ ಬೇವು ಲೇಪನ ಮಾಡುವ ಮುನ್ನ 30 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಯೂರಿಯಾ ಕಾರ್ಖಾನೆಗಳ, ಕಳ್ಳರ ಪಾಲಾಗುತ್ತಿತ್ತು. ಅದು ಇಂದು ರೈತರಿಗೆ ಸಿಗುತ್ತಿದೆ. ಈ ಮೂಲಕ ₹ 10,000 ಕೋಟಿ ಮೌಲ್ಯದ ರಸಗೊಬ್ಬರ ಅವ್ಯವಹಾರ ಆಗುವುದು ತಪ್ಪಿದೆ. ಇದರಿಂದಾಗಿ ‘ಕೆಮಿಕಲ್‌ ಮಾಫಿಯಾ’ ನನ್ನ ಹಿಂದೆ ಬಿದ್ದಿದೆ. ನಾನು ರೈತಪರವಾದ ನಿರ್ಧಾರ ತೆಗೆದುಕೊಂಡಿರುವುದರಿಂದ ಅದಕ್ಕೆ ಹೆದರುವುದಿಲ್ಲ’ ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.