ADVERTISEMENT

ಮೋದಿ ಮಧ್ಯಪ್ರವೇಶಕ್ಕೆ ಒಕ್ಕೊರಲ ಮನವಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 11:37 IST
Last Updated 26 ಜನವರಿ 2018, 11:37 IST
ಮೈಸೂರಿನ ವಿವಿಧ ರಸ್ತೆಯಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಗುರುವಾರ ಜಾಥಾ ನಡೆಸಿದರು
ಮೈಸೂರಿನ ವಿವಿಧ ರಸ್ತೆಯಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಗುರುವಾರ ಜಾಥಾ ನಡೆಸಿದರು   

ಮೈಸೂರು: ಮಹದಾಯಿ ನದಿ ನೀರು ಹಂಚಿಕೆಗೆ ವಿರೋಧ ವ್ಯಕ್ತಪಡಿಸುವ ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳ ವಿರುದ್ಧ ಕನ್ನಡ ಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು. ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಗೆ ಒಕ್ಕೊರಲಿನಿಂದ ಆಗ್ರಹಿಸಿದವು.

ಅಗ್ರಹಾರ ವೃತ್ತದಲ್ಲಿ ಜಮಾಯಿಸಿದ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು, ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದರು.
‘ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ, ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಇದನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿವೆ. ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕೆ ನೀರು ಕೊಡುವುದಕ್ಕೆ ಹಿಂದೇಟು ಹಾಕಲಾಗುತ್ತಿದೆ. ಬಳಕೆಯಾಗದ ನೀರನ್ನು ಸಮುದ್ರಕ್ಕೆ ಬಿಟ್ಟು ವ್ಯರ್ಥ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ. ಎರಡೂ ರಾಜ್ಯಗಳಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಆದರೆ, ಮತ ಬ್ಯಾಂಕ್‌ ರಾಜಕಾರಣದಲ್ಲಿ ನಿರತವಾಗಿರುವ ಬಿಜೆಪಿ, ಕನ್ನಡಿಗರಿಗೆ ದ್ರೋಹ ಬಗೆಯುತ್ತಿದೆ. ನೀರು ಬಿಡುವುದಾಗಿ ಭರವಸೆ ನೀಡಿ ಮಾತಿಗೆ ತಪ್ಪಿದೆ’ ಎಂದು ದೂರಿದರು.

ADVERTISEMENT

ಸೇನಾಪಡೆಯ ಜಿಲ್ಲಾ ಘಟಕದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಗರಾಧ್ಯಕ್ಷ ಪ್ರಜೇಶ್, ಜಗದೀಶ್, ಶಾಂತಮೂರ್ತಿ ಇದ್ದರು.

ಸಾಂಕೇತಿಕ ಧರಣಿ: ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಜಿಲ್ಲಾ ನ್ಯಾಯಾಲಯದ ಗಾಂಧಿ ಪುತ್ಥಳಿಯ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

‘ಕರ್ನಾಟಕ ಬಂದ್‌ಗೆ ಬೆಂಬಲವಿಲ್ಲ. ಇದರಿಂದ ಜನಜೀವನ ಅಸ್ತವ್ಯಸ್ತಗೊಳಿಸಲು ಇಷ್ಟವಿಲ್ಲ. ಆದರೆ, ನಾಡಿನ ನೆಲ–ಜಲದ ಪರವಾಗಿ ಶಾಂತರೀತಿಯ ಹೋರಾಟ ನಡೆಸುತ್ತೇವೆ. ಮಹದಾಯಿ ನದಿ ನೀರು ಕನ್ನಡಿಗರ ಹಕ್ಕು’ ಎಂದರು. ಈ ಹೋರಾಟಕ್ಕೆ ಕೆಲ ವಕೀಲರು ಕೂಡ ಬೆಂಬಲ ವ್ಯಕ್ತಪಡಿಸಿದರು.

ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ, ರೇವಣ್ಣ, ಪೈಲ್ವಾನ್‌ ಬಾಬು ಇದ್ದರು.

ದ್ವಿಚಕ್ರ ವಾಹನ ಜಾಥಾ: ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಒಕ್ಕೂಟದ ಕಾರ್ಯಕರ್ತರು ಗ್ರಾಮಾಂತರ ಬಸ್‌ ನಿಲ್ದಾಣದ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಕನ್ನಡ ಧ್ವಜ ಹಿಡಿದು ವಿವಿಧ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಜಾಥಾ ನಡೆಸಿದರು. ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್‌ ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ರೈಲು ತಡೆಯಲು ಮುಂದಾಗಿದ್ದ ಇವರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್‌ ನೇತೃತ್ವದಲ್ಲಿ ಕೆ.ಆರ್‌.ವೃತ್ತದಲ್ಲಿ ಜಮಾಯಿಸಿದ ಕನ್ನಡ ಪರ ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.