ADVERTISEMENT

ಸಿದ್ದರಾಮಯ್ಯ– ಭ್ರಷ್ಟಾಚಾರ: ಷಾ ಟೀಕಾಪ್ರಹಾರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 6:37 IST
Last Updated 27 ಜನವರಿ 2018, 6:37 IST
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು   

ಮೈಸೂರು: ‘ಭ್ರಷ್ಟಾಚಾರ ಎಂದರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಎಂದರೆ ಭ್ರಷ್ಟಾಚಾರ. ಈ ಎರಡೂ ವಿಚಾರಗಳು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಲ್ಲಿ ಗುರುವಾರ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದರು. ಸುಮಾರು 30 ನಿಮಿಷಗಳ ಕಾಲದ ಭಾಷಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಟೀಕೆಗೆ ಬಳಸಿಕೊಂಡರು. ಭ್ರಷ್ಟಾಚಾರಿ, ದುರಹಂಕಾರಿ ಎಂದು ಜರಿದರು.

‘ಸಿದ್ದರಾಮಯ್ಯ ಅವರು ತಮ್ಮ ತವರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯನ್ನು ತಡೆಯುವ ಪ್ರಯತ್ನ ನಡೆಸಿದರು. ಆ ಪ್ರಯತ್ನಕ್ಕೆ ತಕ್ಕ ಉತ್ತರ ಕೊಟ್ಟಿದ್ದೇವೆ ಎಂದು ಮಾತು ಆರಂಭಿಸಿ, ಕೇಂದ್ರ ಸರ್ಕಾರ ಕೊಟ್ಟ ಕೋಟ್ಯಂತರ ರೂಪಾಯಿ ಹಣ ಕಾಂಗ್ರೆಸ್ ಕಾರ್ಯಕರ್ತರ ಮನೆ ಸೇರಿದೆ. ಜನರ ಒಳಿತಿಗೆ ಬಳಸುವ ಬದಲು ನುಂಗಿಹಾಕಿದ್ದರೆ’ ಎಂದು ಮಾತು ಮುಗಿಸುವವರೆಗೂ ಭ್ರಷ್ಟಾಚಾರದ ವಿಚಾರಗಳನ್ನೇ ಪ್ರಸ್ತಾಪಿಸಿದರು.

ADVERTISEMENT

‘ರಾಜ್ಯದಲ್ಲಿ ಸಚಿವರು ನೂರಾರು ಕೋಟಿ ಅಕ್ರಮಗಳನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ದಿಂಬು, ಹಾಸಿಗೆ ಕೊಡುವಲ್ಲೂ ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ಆತ್ಮೀಯರ ಮನೆ ಮೇಲೆ ದಾಳಿಗಳು ನಡೆದು, ಡೈರಿಗಳಲ್ಲಿರುವ ಹೆಸರು ಹೊರ ಬರುತ್ತಿದ್ದಂತೆ, ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. 14ನೇ ಹಣಕಾಸು ಆಯೋಗದ ಮೂಲಕ ರಾಜ್ಯಕ್ಕೆ ಹೆಚ್ಚುವರಿಯಾಗಿ ₹ 1.30 ಲಕ್ಷ ಕೋಟಿ ಅನುದಾನವನ್ನು ನೀಡಿದ್ದೇವೆ. ಈ ಹಣ ಜನರ ಅಭಿವೃದ್ಧಿಗೆ ಬಳಕೆಯಾಗದೆ ಕಾಂಗ್ರೆಸ್ ಕಾರ್ಯಕರ್ತರ ಮನೆ ಸೇರಿದೆ’ ಎಂದು ಷಾ ಆರೋಪಿಸಿದರು.

‘ಪರಿವರ್ತನಾ ಯಾತ್ರೆ ತಡೆಯುವ ಸಲುವಾಗಿ ಬಂದ್ ಮಾಡಿಸಲಾಗಿದೆ. ಅದಕ್ಕೆ ಸರ್ಕಾರ ಬೆಂಬಲ ವ್ಯಕ್ತಪಡಿಸಿದೆ. ಫೆ.4ರಂದು ಬೆಂಗಳೂರಿನಲ್ಲಿ ನಡೆಯುವ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ಆ ಸಭೆಯನ್ನೂ ವಿಫಲಗೊಳಿಸಲು ಅಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ಸರ್ಕಾರ ಬೆಂಬಲ ನೀಡಿದೆ. ಈ ಎಲ್ಲಾ ಅಡಚಣೆಯನ್ನು ಮೀರಿ ನಿಲ್ಲುವ ಶಕ್ತಿ ಬಿಜೆಪಿಗೆ ಇದೆ. ಈ ಶಕ್ತಿ ಏನು ಎಂಬುದನ್ನು ಮುಂದೆ ತೋರಿಸುತ್ತೇವೆ. ಸಿದ್ದರಾಮಯ್ಯ ತವರು ನೆಲದಲ್ಲಿ ನಿಂತು ಶಪಥಮಾಡುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ತೊಡೆತಟ್ಟಿ ಪಂಥಾಹ್ವಾನ ನೀಡುತ್ತೇವೆ’ ಎಂದು ಸವಾಲು ಹಾಕಿದರು.

‘ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಅದನ್ನು ತಡೆಯುವ ಬದಲು ಮುಸ್ಲಿಂರನ್ನು ಓಲೈಸಲು ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ 20ಕ್ಕೂ ಹೆಚ್ಚು ಆರ್‌ಎಸ್ಎಸ್ ಕಾರ್ಯಕರ್ತರ ಕೊಲೆಯಾಗಿದೆ. ಎಸ್‌ಡಿಪಿಐ ಮೇಲಿದ್ದ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಈ ಬೆಳವಣಿಗೆ ಗಮನಿಸಿದರೆ ಎಸ್‌ಡಿಪಿಐ ಬೆಂಬಲಿಸುತ್ತೀರಾ? ಎಂದು ಕೇಳಬೇಕಾಗಿದೆ’ ಎಂದರು.

ಷಾ ಕಾಲಿಗೆ ಬಿದ್ದ ಯಡಿಯೂರಪ್ಪ

ಸಮಾವೇಶದಲ್ಲಿ ಯಡಿಯೂರಪ್ಪ ಅವರು ಪೇಟ ತೊಡಿಸಿ ಸ್ಮರಣಿಕೆ ನೀಡಿ ಅಮಿತ್‌ ಷಾ ಅವರನ್ನು ಸನ್ಮಾನಿಸಿದರು. ನಂತರ ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು. ಆಗ ಷಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.