ADVERTISEMENT

ವಿಜ್ಞಾನ ವಿದ್ಯಾರ್ಥಿಗಳ ತಬರನ ಕಥೆ!

ನೇಸರ ಕಾಡನಕುಪ್ಪೆ
Published 3 ಫೆಬ್ರುವರಿ 2018, 4:31 IST
Last Updated 3 ಫೆಬ್ರುವರಿ 2018, 4:31 IST
ಮೈಸೂರು ವಿಶ್ವವಿದ್ಯಾನಿಲಯ ಕಾರ್ಯಸೌಧ
ಮೈಸೂರು ವಿಶ್ವವಿದ್ಯಾನಿಲಯ ಕಾರ್ಯಸೌಧ   

ಮೈಸೂರು: ಎಂಎಸ್ಸಿ ಕೋರ್ಸಿಗೆ ಪ್ರವೇಶ ಪಡೆದು, ಇದೀಗ ತರಗತಿಗೆ ಹಾಜರಾಗಬಾರದೆಂದು ಇಬ್ಬರು ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾನಿಲಯ ಹೇಳಿದೆ. ಇದರಿಂದ ಇಬ್ಬರು ವಿದ್ಯಾರ್ಥಿಗಳದು ತಬರನ ಕತೆಯಾಗಿದೆ. ಮನವಿಗಳನ್ನು ಸತತವಾಗಿ ಸಲ್ಲಿಸಿದರೂ ಈವರೆಗೂ ಪ್ರವೇಶ ಸಿಗದೆ ನಡುನೀರಲ್ಲಿ ನಿಲ್ಲುವಂತಾಗಿದೆ.

ಮೈಸೂರು ವಿ.ವಿ 2016–17ನೇ ಸಾಲಿನಲ್ಲಿ ಎಂಎಸ್ಸಿ ಸೈಬರ್‌ ಸೆಕ್ಯೂರಿಟಿ ಎಂಬ ವಿನೂತನ ಕೋರ್ಸ ಅನ್ನು ಪರಿಚಯಿಸಿದೆ. ಈ ಕೋರ್ಸಿಗೆ 7 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಇವರ ಪೈಕಿ ಡಿ.ಪುಟ್ಟರಾಜ ನಾಯಕ ಹಾಗೂ ಎನ್‌.ಸೌಂದರ್ಯ ಎಂಬವರಿಗೂ ಪ್ರವೇಶ ನೀಡಲಾಗಿತ್ತು. ಮೊದಲ ಸೆಮಿಸ್ಟರ್‌ನ ಎಲ್ಲ ತರಗತಿಗಳಿಗೂ ಇವರು ಹಾಜರಾಗಿದ್ದು, ಶೈಕ್ಷಣಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಆದರೆ, ಇದೀಗ ಶುರುವಾಗಿರುವ ಎರಡನೇ ಸೆಮಿಸ್ಟರ್‌ಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದಿರುವ ವಿ.ವಿ ಇವರಿಬ್ಬರನ್ನೂ ಹೊರಗಿಟ್ಟಿದೆ.

ಕಾರಣವೇನು?: ಇವರಿಬ್ಬರೂ ವಿದ್ಯಾರ್ಥಿಗಳು ಪದವಿಯನ್ನು ಕಲಾವಿಭಾಗದಲ್ಲಿ ಮಾಡಿರುವವರು. ಆದರೆ, ಇವರು ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಮಾಡಿದ್ದಾರೆ. ಇದೇ ಆಧಾರದ ಮೇಲೆ ಇವರಿಬ್ಬರಿಗೂ ಎಂಎಸ್ಸಿಗೆ ಪ್ರವೇಶವನ್ನೂ ವಿ.ವಿ ನೀಡಿತ್ತು. ಮೊದಲ ಸೆಮಿಸ್ಟರ್‌ನಲ್ಲಿ ಭಾಗಿಯಾಗಿದ್ದ ಇವರು ವಿ.ವಿ.ಯ ಸಿ–1, ಸಿ–2 ಮತ್ತು ಸಿ–3 ಪರೀಕ್ಷೆಗಳಿಗೂ ಹಾಜರಾಗಿದ್ದಾರೆ. ಆದರೆ, ಅಂತಿಮ ಪರೀಕ್ಷೆಗೆ ಇವರಿಗೆ ಅವಕಾಶ ನೀಡಿಲ್ಲ. ಇದೀಗ ತರಗತಿಗೂ ಬರುವಂತಿಲ್ಲ ಎಂದು ಸೂಚಿಸಲಾಗಿದೆ.

ADVERTISEMENT

ಎಂಎಸ್ಸಿ ಕೋರ್ಸಿಗೆ ಸೇರಬೇಕಾದರೆ ವಿಜ್ಞಾನ ಪದವಿ ಇರಬೇಕು. ಇವರಿಬ್ಬರಿಗೂ ಕಲಾ ಪದವಿ ಇದೆ ಎನ್ನುವುದು ವಿ.ವಿ ನೀಡಿರುವ ಕಾರಣ. ‘ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಅನ್ನು ವಿಜ್ಞಾನದಲ್ಲಿ ಮಾಡಿದರೆ, ಸ್ನಾತಕೋತ್ತರ ಪದವಿ ಕೋರ್ಸಿಗೆ ‍ಪ್ರವೇಶ ನೀಡಲು ಅವಕಾಶವಿದೆ. ಇದೇ ಆಧಾರದ ಮೇಲೆ ಪ್ರವೇಶ ನೀಡಿ, ಈಗ ಆಚೆಯಿಟ್ಟರೆ ಭವಿಷ್ಯದ ಗತಿಯೇನು’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ಪರಿಹಾರವೇನು?: ಈ ಸಂಬಂಧ ವಿ.ವಿ ಮೆಟ್ಟಿಲು ತುಳಿದಿರುವ ಇವರಿಬ್ಬರೂ ಪ್ರವೇಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ವಿ.ವಿ, ಪಠ್ಯಕ್ರಮ ಮಂಡಳಿ, ಶೈಕ್ಷಣಿಕ ಸಿಬ್ಬಂದಿ ಮಂಡಳಿ ಹಾಗೂ ಸಿಂಡಿಕೇಟ್‌ನ ತೀರ್ಮಾನವಾಗಬೇಕು ಎಂದು ಉತ್ತರಿಸಿದೆ.

‘ವಿಜ್ಞಾನ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಲು ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಅರ್ಹತೆಯಾಗಿ ಪರಿಗಣಿಸಬಹುದೆ ಎಂಬುದರ ಕುರಿತು ಗೊಂದಲವಿದೆ. ಹಾಗಾಗಿ, ಈ ಮೇಲಿನ ಮಂಡಳಿಗಳಲ್ಲಿ ವಿಷಯ ಚರ್ಚೆಯಾಗಿ ತೀರ್ಮಾನವಾಗಬೇಕು’ ಎಂದು ವಿ.ವಿ. ಕುಲಸಚಿವೆ ಡಿ.ಭಾರತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇವರಿಬ್ಬರಿಗೂ ಪ್ರವೇಶ ನೀಡಿಯಾಗಿದೆ. ಲೋಪವೇನಾದರೂ ಇದೆಯೇ ಎಂಬ ಪ್ರಶ್ನೆಯಿದೆ. ಇದು ಬಗೆಹರಿಯಬೇಕು. ವಿದ್ಯಾರ್ಥಿಗಳಿಗೆ ಅನ್ಯಾಯವಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.