ADVERTISEMENT

ಮೈಸೂರು: ಬೆಲವತ್ತ–ಮೇಟಗಳ್ಳಿ ಮಧ್ಯೆ ಸಂಪರ್ಕ ಕಡಿತ

ಆರ್‌ಬಿಐ ನಿರ್ಬಂಧಿತ ಪ್ರದೇಶ ಘೋಷಣೆ; ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಹೆಚ್ಚಿನ ಪ್ರಯಾಣ ಅವಧಿ

ಜಿ.ಬಿ.ನಾಗರಾಜ್
Published 4 ಫೆಬ್ರುವರಿ 2018, 6:33 IST
Last Updated 4 ಫೆಬ್ರುವರಿ 2018, 6:33 IST
ಬೆಲವತ್ತ–ಮೇಟಗಳ್ಳಿ ನಡುವೆ ಸಂಪರ್ಕ ಕಲ್ಪಿಸಿದ ರಸ್ತೆಗೆ ಆರ್‌ಬಿಐ ಆವರಣದ ಬಳಿ ಅಳವಡಿಸಿದ ಗೇಟಿನ ಬಳಿ ಸಿಐಎಸ್‌ಎಫ್‌ ಭದ್ರತೆ --–ಸಂಗ್ರಹ ಚಿತ್ರ
ಬೆಲವತ್ತ–ಮೇಟಗಳ್ಳಿ ನಡುವೆ ಸಂಪರ್ಕ ಕಲ್ಪಿಸಿದ ರಸ್ತೆಗೆ ಆರ್‌ಬಿಐ ಆವರಣದ ಬಳಿ ಅಳವಡಿಸಿದ ಗೇಟಿನ ಬಳಿ ಸಿಐಎಸ್‌ಎಫ್‌ ಭದ್ರತೆ --–ಸಂಗ್ರಹ ಚಿತ್ರ   

ಮೈಸೂರು: ಇಲ್ಲಿನ ಹೊರವಲಯದ ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ನೋಟು ಮುದ್ರಣ ಘಟಕದ ಆವರಣವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಕೇಂದ್ರ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದ ಪರಿಣಾಮ ಬೆಲವತ್ತ ಹಾಗೂ ಮೇಟಗಳ್ಳಿ ಕೈಗಾರಿಕಾ ಪ್ರದೇಶದ ನಡುವೆ ಸಂಪರ್ಕ ಕಡಿತಗೊಂಡಿದೆ.

ಆರ್‌ಬಿಐ ಆವರಣದ ಮೂಲಕ ಬೆಲವತ್ತದಿಂದ ಮೇಟಗಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿದ್ದ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಜ.27ರಿಂದ ನಿರ್ಬಂಧ ವಿಧಿಸಲಾಗಿದೆ. ಈ ಗ್ರಾಮದ ಬಹುತೇಕ ಕಾರ್ಮಿಕರು ರಿಂಗ್‌ ರಸ್ತೆ ಅಥವಾ ವರುಣಾ ನಾಲೆಯ ಮೂಲಕ ಸಾಗುವುದು ಅನಿವಾರ್ಯವಾಗಿದೆ.

ಭದ್ರತೆ ದೃಷ್ಟಿಯಿಂದ ಆದೇಶ: ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಸುಮಾರು 350 ಎಕರೆ ವಿಸ್ತೀರ್ಣದಲ್ಲಿ ಆರ್‌ಬಿಐ ನೋಟು ಮುದ್ರಣಾ ಘಟಕವಿದೆ. ಈ ಪೈಕಿ ಕಾಗದ ಹಾಗೂ ನೋಟು ಮುದ್ರಣ ಘಟಕವನ್ನು ಮಾತ್ರ ಈವರೆಗೆ ನಿರ್ಬಂಧಿತ ಪ್ರದೇಶವೆಂದು ಪರಿಗಣಿಸಲಾಗಿತ್ತು. ಅಲ್ಲಿಗೆ ಮಾತ್ರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಫ್‌) ಭದ್ರತೆ ಒದಗಿಸಿತ್ತು. ಉಳಿದ ಪ್ರದೇಶದ ಭದ್ರತೆಯ ಹೊಣೆ ಮೇಟಗಳ್ಳಿ ಠಾಣೆಯ ಪೊಲೀಸರ ಮೇಲಿತ್ತು. ವಸತಿ ಸಮುಚ್ಚಯದಲ್ಲಿ ಹೆಚ್ಚುತ್ತಿರುವ ಕಳವು ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣ ಆವರಣವನ್ನು ನಿರ್ಬಂಧಿತ ಪ್ರದೇಶವೆಂದು ಕೇಂದ್ರ ಗೃಹ ಸಚಿವಾಲಯ ಈಚೆಗೆ ಆದೇಶ ಹೊರಡಿಸಿದೆ.

ADVERTISEMENT

ಘಟಕದ ಉತ್ತರ ದಿಕ್ಕಿನಲ್ಲಿರುವ ಶಾದನಹಳ್ಳಿ, ನಾಗನಹಳ್ಳಿ, ದಕ್ಷಿಣಕ್ಕಿರುವ ಮೇಟಗಳ್ಳಿ, ಪೂರ್ವಕ್ಕಿರುವ ಬೆಲವತ್ತ ಹಾಗೂ ಪಶ್ಚಿಮ ದಿಕ್ಕಿನಲ್ಲಿರುವ ಮೇಟಗಳ್ಳಿ ಕೈಗಾರಿಕಾ ಪ್ರದೇಶದವರೆಗಿನ ಸ್ಥಳವನ್ನು ನಿರ್ಬಂಧಿತ ಪ್ರದೇಶವೆಂದು ಪರಿಗಣಿಸಲಾಗಿದೆ. ಬೆಲವತ್ತ ಹಾಗೂ ಮೆಟಗಳ್ಳಿ ನಡುವೆ ಆರ್‌ಬಿಐ ಇದೆ. ಈ ಆವರಣದ ಮೂಲಕವೇ ಸಂಪರ್ಕ ಕಲ್ಪಿಸಿದ್ದ ರಸ್ತೆಯನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಸಿಐಎಸ್‌ಎಫ್‌ ಸಿಬ್ಬಂದಿಯನ್ನು ಪಹರೆಗೆ ನಿಯೋಜಿಸಲಾಗಿದೆ.

ಪರ್ಯಾಯ ಮಾರ್ಗಕ್ಕೆ ಕೋರಿಕೆ: ‘ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿರುವ ಬಹುತೇಕರು ಬೆಲವತ್ತದಲ್ಲಿ ನೆಲೆಸಿದ್ದಾರೆ. ಪಾಳಿವಾರು ಕೆಲಸ ಮಾಡುವ ಇವರು ಹಗಲು ಮತ್ತು ರಾತ್ರಿ ಸಂಚರಿಸುತ್ತಾರೆ. ಪರ್ಯಾಯ ಮಾರ್ಗ ಕಲ್ಪಿಸದೆ ಸಂಪರ್ಕ ರಸ್ತೆಯನ್ನು ಮುಚ್ಚಿರುವುದು ತೊಂದರೆ ಆಗಿದೆ.

ಸುಮಾರು 3 ಕಿ.ಮೀ ಸುತ್ತಿಕೊಂಡು ಮೇಟಗಳ್ಳಿ ತಲುಪಬೇಕಾಗಿದೆ. ರಾತ್ರಿ ವೇಳೆ ರಿಂಗ್‌ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ’ ಎಂದು ಗ್ರಾಮದ ಮುಖಂಡ ಬೆಲವತ್ತ ರಾಮಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆರ್‌ಬಿಐ ಸ್ಥಾಪನೆಯ ಸಂದರ್ಭದಲ್ಲಿ ಬನ್ನಿಮಂಟಪ–ಬೆಲವತ್ತ– ಶಾದನಹಳ್ಳಿ–ಮೇಟಗಳ್ಳಿ ರಸ್ತೆಯನ್ನೂ ಸೇರಿಸಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ.

ಉಳಿದಿದ್ದ ಮತ್ತೊಂದು ಮಾರ್ಗವನ್ನೂ ಮುಚ್ಚಿದ್ದು ಸರಿಯಲ್ಲ. ಕಾಂಪೌಂಡ್‌ ಪಕ್ಕದಲ್ಲಿ ಬದಲಿ ರಸ್ತೆ ನಿರ್ಮಿಸಿ ಸಾರಿಗೆ ಬಸ್‌ ಸಂಪರ್ಕ ಕಲ್ಪಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.