ADVERTISEMENT

ಸಂಚಾರ ನಿರ್ಬಂಧ: ಭಣಗುಡುತ್ತಿದ್ದ ರಸ್ತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 5:49 IST
Last Updated 20 ಫೆಬ್ರುವರಿ 2018, 5:49 IST

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ವಾಸ್ತವ್ಯ ಹೂಡಿದ್ದ ರ‍್ಯಾಡಿಸನ್‌ ಬ್ಲೂ ಹೋಟೆಲ್‌ ಸುತ್ತಲಿನ ರಸ್ತೆಯಲ್ಲಿ ವಾಹನ ಹಾಗೂ ಜನಸಂಚಾರವನ್ನು ನಿರ್ಬಂಧಿಸಿದ ಪರಿಣಾಮ ಚಾಮುಂಡಿಬೆಟ್ಟದ ತಪ್ಪಲಿನ ಬಹುತೇಕ ಮಾರ್ಗಗಳು ಸೋಮವಾರ ಬಿಕೊ ಎನ್ನುತ್ತಿದ್ದವು.

ಹೋಟೆಲ್‌ ಸಂಪರ್ಕಿಸುವ ಎಲ್ಲ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿದ ಪೊಲೀಸರು, ಅತಿಗಣ್ಯ ವ್ಯಕ್ತಿಗಳ (ವಿವಿಐಪಿ) ಶಿಷ್ಟಾಚಾರದ ಪ್ರಕಾರ ಭದ್ರತೆ ಒದಗಿಸಿದ್ದರು. ಎಂ.ಜಿ.ರಸ್ತೆ, ಮೃಗಾಲಯದ ಮುಂಭಾಗದ ಮಾರ್ಗ ಹಾಗೂ ಲಲಿತಮಹಲ್‌ ರಸ್ತೆಯ ಪಾರ್ಶ್ವಭಾಗ ಭಾನುವಾರ ರಾತ್ರಿ 10ರಿಂದ ಸೋಮವಾರ ಮಧ್ಯಾಹ್ನ 1.30ರ ವರೆಗೆ ಬಂದ್ ಆಗಿದ್ದವು.

ಈ ಮಾರ್ಗದಲ್ಲಿ ಸಾಗುವ ವಾಹನಗಳಿಗೆ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು. ಎಂ.ಜಿ.ರಸ್ತೆಯಿಂದ ಮಾಲ್‌ ಆಫ್‌ ಮೈಸೂರು ಕಡೆ ಹೋಗುವ ವಾಹನಗಳು ವಸ್ತುಪ್ರದರ್ಶನ ಮೈದಾನ ಪ್ರವೇಶಿಸಿ ಇಟ್ಟಿಗೆಗೂಡು ಮೂಲಕ ಮುಂದೆ ಸಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಚಾಮುಂಡಿಬೆಟ್ಟಕ್ಕೆ ಹೋಗುವವರು ರಿಜೆನ್ಸಿ ಚಿತ್ರಮಂದಿರದ ಮುಂಭಾಗದಲ್ಲಿ ಸಾಗಿದರು. ರೇಸ್‌ಕೋರ್ಸ್ ಮುಂಭಾಗ ಹಾಗೂ ಹಿಂಭಾಗದ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶವಿರಲಿಲ್ಲ.

ADVERTISEMENT

ಭದ್ರತೆಯ ದೃಷ್ಟಿಯಿಂದ ಎಂ.ಜಿ.ರಸ್ತೆಯ ಮೇಲ್ಸೇತುವೆ ಸಮೀಪವೇ ನಿರ್ಬಂಧಿತ ಪ್ರದೇಶವೆಂದು ಪೊಲೀಸರು ಘೋಷಿಸಿದ್ದರು. ತರಕಾರಿ ಮಾರುಕಟ್ಟೆಯೂ ನಿರ್ಬಂಧಿತ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿತ್ತು. ಇದರಿಂದ ವಹಿವಾಟಿಗೆ ತೊಂದರೆ ಆಗುವ ಸಾಧ್ಯತೆ ಇತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಮಾರುಕಟ್ಟೆಯಲ್ಲಿ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿತ್ತು. ವ್ಯಾಪಾರಸ್ಥರು ಹಾಗೂ ಗ್ರಾಹಕರ ಚಟುವಟಿಕೆ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು.

ಮಾಲ್‌ ಆಫ್‌ ಮೈಸೂರು ಎಂದಿನಂತೆ ಬೆಳಿಗ್ಗೆ 9.45ಕ್ಕೆ ತೆರೆಯಿತು. ಇಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಯ ಗುರುತಿನ ಚೀಟಿಯನ್ನು ಪೊಲೀಸರು ಪರಿಶೀಲಿಸಿದರು. ಇಟ್ಟಿಗೆಗೂಡು ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಆದರೆ, ಸಾರ್ವಜನಿಕರಿಗೆ ಮಾಲ್‌ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಹೀಗಾಗಿ, ಮಧ್ಯಾಹ್ನ 1.45ರ ವರೆಗೂ ಇಲ್ಲಿ ವಹಿವಾಟು ಸ್ಥಗಿತಗೊಂಡಿತ್ತು.

ಮೋದಿ ಅವರು ವಾಸ್ತವ್ಯ ಹೂಡಿದ್ದ ಹೋಟೆಲಿನಲ್ಲಿ ಬಿಜೆಪಿ ನಾಯಕರು ಭೇಟಿ ನೀಡಿ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದರು. ಶ್ರವಣಬೆಳಗೊಳಕ್ಕೆ ತೆರಳಲು ಲಲಿತಮಹಲ್‌ ಹೆಲಿಪ್ಯಾಡಿಗೆ ಕಾರಿನಲ್ಲಿ ಸಾಗುತ್ತಿದ್ದ ಪ್ರಧಾನಿಯನ್ನು ಕಂಡು ರಸ್ತೆ ಬದಿಯಲ್ಲಿ ನಿಂತಿದ್ದ ಸಾರ್ವಜನಿಕರು ‘ಮೋದಿ’ ಎಂದು ಕೂಗುತ್ತಿದ್ದರು. ಅಭಿಮಾನಿಗಳತ್ತ ಮೋದಿ ಕೈಬಿಸಿ ಮುಂದೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.