ADVERTISEMENT

75 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಹಾಲಕ್ಷ್ಮಿ ಸ್ವೀಟ್ಸ್‌ ವಾರ್ಷಿಕೋತ್ಸವ; ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ 2.5ಕೆ.ಜಿ. ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 20:44 IST
Last Updated 15 ಏಪ್ರಿಲ್ 2019, 20:44 IST
ಮಹಾಲಕ್ಷ್ಮಿ ಸ್ವೀಟ್ಸ್‌ನ ವಾರ್ಷಿಕೋತ್ಸವ ಅಂಗವಾಗಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
ಮಹಾಲಕ್ಷ್ಮಿ ಸ್ವೀಟ್ಸ್‌ನ ವಾರ್ಷಿಕೋತ್ಸವ ಅಂಗವಾಗಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು   

ಪ್ರಜಾವಾಣಿ ವಾರ್ತೆ

ಮೈಸೂರು: ಮಹಾಲಕ್ಷ್ಮಿ ಸ್ವೀಟ್ಸ್‌ನ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಶೈಕ್ಷಣಿಕ ಸಾಲಿನಲ್ಲಿ ಮುಂದುವರೆಯುತ್ತಿರುವ ನೌಕರರ ಪ್ರತಿಭಾವಂತ ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಶ್ವೇಶ್ವರನಗರ ಮಾಧವ ಶೆಣೈ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ 75 ವಿದ್ಯಾರ್ಥಿಗಳು ಹಾಗೂ ಸಮಾಜ ಸೇವಕರನ್ನು ಪುರಸ್ಕಾರಿಸಲಾಯಿತು.

ADVERTISEMENT

ಮೊದಲಿಗೆ ದೀನಬಂಧು ಟ್ರಸ್ಟ್‌ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ, ಚಾಮರಾಜನಗರ ಜಿಲ್ಲೆಯ ರೈತ ರೇಚಣ್ಣ ಹಾಗೂ ಪಾಂಡವಪುರ ತಾಲ್ಲೂಕಿನಪುಸ್ತಕ ಮನೆ ಖ್ಯಾತಿಯ ಅಂಕೇಗೌಡ ಅವರನ್ನು ಗೌರವಿಸಲಾಯಿತು. ನಂತರ ನೌಕರರ ಪ್ರತಿಭಾವಂತ ಮಕ್ಕಳಾದ ರಕ್ಷಿತಾ, ಲಾಂಚನಾ, ಕೆ.ಐಶ್ವರ್ಯ, ಸಿ.ದೇವಿಕಾ, ಆರ್.ಸುಹಾಸ್‌, ಶಶಾಂಕ್‌, ಕೆ.ಎನ್.ವಿಜಯ್‌, ಜಿ.ಭಾಗ್ಯ, ಮೊನಿಷಾ, ಸೂರಜ್‌, ಪವಿತ್ರಾ, ಬಿ.ಚಂದ್ರಶೇಖರ, ಕೀರ್ತಿ ಹಾಗೂ ನಿತೀಶ್ರೀ ಸೇರಿದಂತೆ 75 ವಿದ್ಯಾರ್ಥಿಗಳಿಗೆ ಸುಮಾರು ₹ 5 ಲಕ್ಷದ ವರೆಗೆ ಪ್ರತಿಭಾಪುರಸ್ಕಾರ ನೀಡಲಾಯಿತು.

ಅಲ್ಲದೇ, ವಿಶೇಷ ಕಾಣಿಕೆಯಾಗಿ ರಾಮಕೃಷ್ಣ ಆಶ್ರಮದ ಮೂಲಕ ದಾವಣಗೆರೆಯ ಆಧ್ಯಾತ್ಮಿಕ ಸಂಸ್ಥೆಗೆ ₹5, ಗೆಜ್ಜಗಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹ 2ಲಕ್ಷ, ಮೈಸೂರಿನ ದೀನಬಂಧು ಟ್ರಸ್ಟ್‌, ಶಕ್ತಿಧಾಮ, ಜನಜಾಗರಣಾ ಟ್ರಸ್ಟ್‌ಗೆ ತಲಾ ₹1 ಲಕ್ಷ ಹಾಗೂ ನಿರೀಕ್ಷೆ ಸಂಸ್ಥೆ, ಕರುಣಾಮಯಿ ವಿಶೇಷ ಮಕ್ಕಳ ಸಂಸ್ಥೆಗೆ ತಲಾ ₹50 ಸಾವಿರದ ಚೆಕ್‌ ವಿತರಿಸಲಾಯಿತು. ಇದೇ ವೇಳೆ ಮೈಸೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ 2.5ಕೆ.ಜಿ ಬೆಳ್ಳಿಯನ್ನೂ ನೀಡಲಾಯಿತು.

ವೈದ್ಯಕೀಯ ವಿದ್ಯಾರ್ಥಿನಿ ಎಂ.ಗಗನಾ, ಮನುಷ್‌ ಹಾಗೂ ನಂದಿತಾ ರಾಜ್‌ ಅವರ ಶಿಕ್ಷಣಾಭ್ಯಾಸಕ್ಕಾಗಿ ತಲಾ ₹25 ಸಾವಿರ ಗೌರವಧನ ನೀಡಲಾಯಿತು. ನಂತರ ಸಿಬ್ಬಂದಿ ಕಾಟ್ವಾಳ್‌ ಕುಮಾರ್‌, ವೀರಭದ್ರ, ಸುಜಾತಾ, ಶೋಭಾ, ಸಿದ್ದಪ್ಪ, ಸತೀಶ್‌ ಹಾಗೂ ರವಿ ಅವರಿಗೆ ‘2018–19ನೇ ಸಾಲಿನ ಉತ್ತಮ ಉದ್ಯೋಗಿ’ ಪ್ರಶಸ್ತಿ, 5 ಜನರಿಗೆ ಗೃಹೋಪಯೋಗಿ ವಸ್ತುಗ ಳಿರುವ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ‘ಸಮಾಜದಿಂದ ನಾವು ಸಾಕಷ್ಟು ಗಳಿಸುತ್ತೇವೆ. ಅದೇ ರೀತಿ ನಾವೂ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಈ ಉದ್ದೇಶದಿಂದ, ಕಳೆದ 5 ವರ್ಷಗಳಿಂದ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ’ ಎಂದರು. ‌

ಸನ್ಮಾನ ಸ್ವೀಕರಿಸಿ ಅಂಕೇಗೌಡ ಅವರು ಮಾತನಾಡಿ, ‘ಜಗತ್ತಿನಲ್ಲಿರುವ ಜ್ಞಾನವನ್ನು ಪಡೆದುಕೊಳ್ಳಲಿ, ವಿದ್ಯಾರ್ಥಿಗಳಿಗೆ, ಓದುಗರಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸುಮಾರು 10ಲಕ್ಷ ಪುಸ್ತಕಗಳನ್ನು ಒಂದೇ ಸೂರಿನಡಿ ಸಂಗ್ರಹಿಸಲಾಗಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಡಾ.ಎಸ್‌.ಎಲ್.ಭೈರಪ್ಪ ಅವರು ಮಾತನಾಡುವುದಿಲ್ಲ ಎಂದರು.

ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾನಂದ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.