ADVERTISEMENT

8ರಿಂದ ‘ರೈತ ದಸರಾ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 10:26 IST
Last Updated 20 ಸೆಪ್ಟೆಂಬರ್ 2013, 10:26 IST

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಕಾರ್ಯಕ್ರಮಗಳು ಅಕ್ಟೋಬರ್‌ 8ರಿಂದ 10ರವರೆಗೆ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿದೆ.

ಅ. 8ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ರೈತ ದಸರಾ ಮೆರವಣಿಗೆ ಹೊರಡಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಚಾಲನೆ ನೀಡಲಿದ್ದಾರೆ. ಈ ಬಾರಿ ನಡೆಯುವ ಮೆರವಣಿಗೆಯು ವಿಶೇಷವಾಗಿದ್ದು, ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಜನರನ್ನು ಆಕರ್ಷಿಸಲಿವೆ’ ಎಂದು ರೈತ ದಸರಾ ಉಪ ಸಮಿತಿ ಅಧ್ಯಕ್ಷ ನಿರಂಜನ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೆ.ಆರ್‌. ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಹಾದು ಹೋಗುವ ಮೆರವಣಿಗೆ ಜೆ.ಕೆ. ಮೈದಾನದಲ್ಲಿ ಅಂತ್ಯಗೊಳ್ಳಲಿದೆ. ನಾದಸ್ವರ, ಅಲಂಕೃತಗೊಂಡ ಎರಡು ಜೊತೆ ಎತ್ತುಗಳು, ಎತ್ತಿನ ಗಾಡಿಗಳು, ಕಳಶಗಳನ್ನು ಹೊತ್ತ ಮಹಿಳೆಯರು, ಪುರುಷ–ಮಹಿಳಾ ವೀರಗಾಸೆ ತಂಡ, ಪೂಜಾ ಕುಣಿತ, ಡೊಳ್ಳು ಕುಣಿತ, ನಗಾರಿ, ಕೃಷಿ ಚಟುವಟಿಕೆ ಬಿಂಬಿಸುವ 8–10ಸ್ತಬ್ಧಚಿತ್ರಗಳು, ಗಾಡಿಗೊಂಬೆ, ಕರಡಿ ಕುಣಿತ, ಕಂಸಾಳೆ, ಟಿಬೆಟನ್ನರ ಕುಣಿತ ಮತ್ತು ನಂದಿ ಧ್ವಜ ಮೆರವಣಿಗೆಗೆ ಕಳೆ ಕಟ್ಟಲಿವೆ’ ಎಂದು ಹೇಳಿದರು.

‘ಕೃಷಿ ಇಲಾಖೆಗೆ ಸಂಬಂಧಿಸಿದ ಇತರೆ ಇಲಾಖೆಗಳ ವಸ್ತುಪ್ರದರ್ಶನ ಜೆ.ಕೆ. ಮೈದಾನದಲ್ಲಿ ಅಂದು ನಡೆಯಲಿದೆ. ಬೆಳಿಗ್ಗೆ 11.30ಕೆ್ಕೆ ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ವಸ್ತುಪ್ರದರ್ಶನ ಉದ್ಘಾಟಿಸಲಿದ್ದಾರೆ. ರೈತ ದಸರಾವನ್ನು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಬೆಳಿಗ್ಗೆ 11.45ಕ್ಕೆ ಉದ್ಘಾಟಿಸುವರು. ಸಾಕುಪ್ರಾಣಿಗಳ ಪ್ರದರ್ಶನ, ವಿವಿಧ ಇಲಾಖೆಗಳಿಂದ ಕೃಷಿ ಪರಿಕರಗಳ ಪ್ರದರ್ಶನ ಇರುತ್ತದೆ. ಸಾಧಕ ರೈತರು, ಯುವ ಕೃಷಿ ರೈತರು, ರೈತ ವಿಜ್ಞಾನಿಗಳು ಮತ್ತು ಅತ್ಯುತ್ತಮ ಕಾರ್ಯಕರ್ತರಿಗೆ ಸನ್ಮಾನ ಮಾಡಲಾಗುವುದು. 32 ಮಳಿಗೆಗಳು ಪ್ರದರ್ಶನದಲ್ಲಿ ಬರಲಿವೆ’ ಎಂದು ತಿಳಿಸಿದರು.

‘ಅ. 9ರಂದು ಗ್ರಾಮೀಣ ದಸರಾ ಕ್ರೀಡಾಕೂಟ ಏರ್ಪಡಿಸಲಾಗಿದೆ. ವರುಣಾ ಗ್ರಾಮದ ಬಳಿ ಕೆಸರು ಗದ್ದೆ ಓಟ, ಗುಂಡು ಎತ್ತುವ ಸ್ಪರ್ಧೆ, ಗೊಬ್ಬರದ ಮೂಟೆ ಹೊತ್ತು ಓಡುವುದು, ಬಿಂದಿಗೆ ಹೊತ್ತು ಓಡುವುದು ಹೀಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಅ. 10ರಂದು ಹಾಲು ಕರೆಯುವ ಸ್ಪರ್ಧೆ ಇದೆ. ಇದರಲ್ಲಿ ನಾಲ್ಕು ಬಹುಮಾನಗಳನ್ನು ನೀಡಲಾಗುವುದು. ಪ್ರಥಮ ಬಹುಮಾನ ರೂ 50, ದ್ವಿತೀಯ ರೂ 40, ತೃತೀಯ ರೂ 30 ಮತ್ತು ನಾಲ್ಕನೆಯ ಬಹುಮಾನ ರೂ 20 ಸಾವಿರ ನಗದನ್ನು ನೀಡಲಾಗುವುದು. ಈ ವರ್ಷ ರೂ 4 ಲಕ್ಷ ನಗದನ್ನು ರೈತ ದಸರಾಕ್ಕೆ ನೀಡುವುದಾಗಿ ಸರ್ಕಾರ ತಿಳಿಸಿದೆ. ಆದರೆ ಇಷ್ಟು ಹಣ ಸಾಕಾಗುವುದಿಲ್ಲ. ರೂ 9.97 ಲಕ್ಷ  ಹಣ ಬಿಡುಗಡೆ ಮಾಡುವಂತೆ ಕೋರಲಾಗುವುದು’ ಎಂದು ತಿಳಿಸಿದರು.

ರೈತ ದಸರಾ ಕಾರ್ಯಾಧ್ಯಕ್ಷ ಮಹಾಂತೇಶಪ್ಪ, ಉಪಾಧ್ಯಕ್ಷ ಅನಿಲ್‌ಕುಮಾರ್‌, ಕಾರ್ಯದರ್ಶಿ ದೇವದಾಸ್‌, ಸದಸ್ಯರಾದ ರುದ್ರಪ್ಪ, ತೇಜಸ್ವಿಗೌಡ, ಮಹದೇವು, ಬೀರೇಗೌಡ, ದೊಡ್ಡರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.