ADVERTISEMENT

ಚಾಮರಾಜನಗರ | ಮಾದಪ್ಪನ 'ಲೀಲೆ' ಸಾರುವ ಮ್ಯೂಸಿಯಂ

ದೀಪದ‌ಗಿರಿಒಡ್ಡಿನ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆಯ ತಳಭಾಗದಲ್ಲಿ ನಿರ್ಮಾಣ

ಎಂ.ಮಹೇಶ
Published 23 ಏಪ್ರಿಲ್ 2025, 22:30 IST
Last Updated 23 ಏಪ್ರಿಲ್ 2025, 22:30 IST
   

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಮಾದಪ್ಪನ ದರ್ಶನಕ್ಕೆಂದು ಮಹದೇಶ್ವರ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಹೊಸ ಆಕರ್ಷಣೆಯೊಂದು ತೆರೆದುಕೊಂಡಿದೆ. ಮಾಯಕಾರಸ್ವಾಮಿಯ ಲೀಲೆಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಈಗ ಕಲ್ಪಿಸಲಾಗಿದೆ.

ಇಲ್ಲಿನ ದೀಪದ‌ಗಿರಿಒಡ್ಡಿನ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆಯ ತಳಭಾಗದಲ್ಲಿ ನಿರ್ಮಾಣವಾಗಿರುವ ಮ್ಯೂಸಿಯಂನಲ್ಲಿ ಮಹದೇಶ್ವರದ ಲೀಲೆಗಳನ್ನು ಕಣ್ತುಂಬಿಕೊಳ್ಳಬೇಕು. ಚಿತ್ರ, ದೃಶ್ಯರೂಪಕದ ಮೂಲಕ ಸ್ವಾಮಿಯ ಚರಿತ್ರೆಯನ್ನು ತಿಳಿದುಕೊಳ್ಳಬಹುದಾಗಿದೆ. ಈ ಮ್ಯೂಸಿಯಂನ ಅಧಿಕೃತ ಅನಾವರಣವನ್ನು ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರು ಗುರುವಾರ (ಏ.24)ರಂದು ನೆರವೇರಿಸಲಿದ್ದಾರೆ.

₹ 22 ಕೋಟಿ ವೆಚ್ಚದಲ್ಲಿ ಈ ಯೋಜನೆ ಸಿದ್ಧವಾಗಿದ್ದು, ಮಹದೇಶ್ವರ ಸ್ವಾಮಿಯ ಭಕ್ತರ ಜೊತೆಗೆ ಇತಿಹಾಸಪ್ರಿಯರಿಗೂ ಇಷ್ಟವಾಗಲಿದೆ.

ADVERTISEMENT

ಈ ಮ್ಯೂಸಿಯಂ ಇರುವ ಗಿರಿಯ ಪ್ರದೇಶಕ್ಕೆ ತೆರಳಲು ಸುಸಜ್ಜಿತ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.

ಗುಹೆಯ ರೀತಿಯ ಒಳಾವರಣದಲ್ಲಿ ಮ್ಯೂಸಿಯಂ ಮೈದಳೆದಿದೆ. ಒಂದೊಂದು ಲೀಲೆಗಳನ್ನೂ ಕ್ರಮವಾಗಿ ಪರಿಚಯಿಸುವ ಕೆಲಸವನ್ನು ಅಲ್ಲಿ ಮಾಡಲಾಗಿದೆ. ಒಂದೊಂದು ಚಿತ್ರವೂ(ರೂಪಕವೂ) ಒಂದೊಂದು ಲೀಲೆಯ ಕಥೆಯನ್ನು ಹೇಳುತ್ತದೆ.

ಶ್ರೀಶೈಲದ ಉತ್ತಮಪುರದಲ್ಲಿ ಮಲೆಮಹದೇಶ್ವರನ ಜನನ, ಮರಿದೇವರೆಂಬ ನಾಮಕರಣ ಸಂಭ್ರಮ, ಮಾತಾ-ಪಿತರಾದ ಚಂದ್ರಶೇಖರ ಮೂರ್ತಿ ಮತ್ತು ಉತ್ತರಾಜಮ್ಮ ಅವರು ಮರಿದೇವರನ್ನು ಧಾರ್ಮಿಕ ಶಿಕ್ಷಣಕ್ಕಾಗಿ ವ್ಯಾಘ್ರಾನಂದರ ಆಶ್ರಮಕ್ಕೆ ಸೇರಿಸುವುದು, ಸುತ್ತೂರು ಮಠದಲ್ಲಿ ರಾಗಿ ಬೀಸುವ ಕಾಯಕ, ಸಿದ್ದನಂಜ ದೇಶಿಕೇಂದ್ರರಿಂದ ಶಿವಯೋಗ ರಹಸ್ಯದ ಬೋಧನೆ ಮೊದಲಾದ ದೃಶ್ಯಕಾವ್ಯವನ್ನು ಅಲ್ಲಿ ಕಟ್ಟಿಕೊಡಲಾಗಿದೆ.

ಕಾವೇರಿ ನದಿಯನ್ನು ದಾಟಿಸಲು ಅಂಬಿಗರು ನಿರಾಕರಿಸುವುದು, ಪದ್ಮಾಸನಸ್ಥರಾಗಿ ಮಲೆಮಹದೇಶ್ವರರು ನದಿಯನ್ನು ದಾಟಿದ ದೃಶ್ಯವನ್ನು ಚಿತ್ರಿಸಲಾಗಿದೆ.

ಕುಂತೂರು ಮಠದಲ್ಲಿದ್ದಾಗ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಜೊತೆ ಇದ್ದದ್ದು, ಪ್ರಭುಸ್ವಾಮಿ ಪೂಜೆ ನೆರವೇರಿಸುವಾಗ ಗೊದ್ದ, ಗೋಸುಂಬೆಗಳಿಗೆ ತೀರ್ಥ ಚುಮುಕಿಸಿ,

ಹೂವು ಹಾಕಿದುದು, ಕೊಂಗಳ್ಳಿ ಮಲ್ಲಪ್ಪ, ಮಂಗಲದ ಶಂಕರಪ್ಪ, ಕುಂತೂರು ಸಿದ್ದಪ್ಪ, ಉಪ್ಪಿನಹಳ್ಳಿಯ ಬಸಪ್ಪ, ಮೂಕಳ್ಳಿ ಮಾಯಮ್ಮ ಮೊದಲಾದ ಶರಣರೊಂದಿಗೆ ಇದ್ದ ರೂಪಕಗಳಿವೆ.

ತಾಳುಬೆಟ್ಟದಿಂದ ನಡುಮಲೆಗೆ ಹುಲಿಯನೇರಿ ಪ್ರಯಾಣ ಮಾಡಿದ್ದು, ಸಹವರ್ತಿಗಳಾಗಿ ಬಸಬನು ಬಸವ ಮಾರ್ಗದಲ್ಲಿ ಹಾಗೂ ಸರ್ಪವು ಸರ್ಪಮಾರ್ಗದಲ್ಲಿ ಹಿಂಬಾಲಿಸುವ ಚಿತ್ರಣವಿದೆ.

ಮೊದಲ ಬಾರಿಗೆ ಬೇವಿನ ಹಟ್ಟಿ ಕಾಳಮ್ಮನ ಭೇಟಿ ಹಾಗೂ ಕಾಯಕ ಮಾಡುವಂತೆ ಮಹದೇಶ್ವರರಿಂದ ಬೋಧನೆ, ಸಾಲೂರು ಮಠದಲ್ಲಿ ಮುಪ್ಪಿನ ಸ್ವಾಮಿಯವರ ಭೇಟಿ, ಮಠದ ಜೀರ್ಣೋದ್ಧಾರಕ್ಕಾಗಿ ಮುಹೂರ್ತ ಕಂಬ ನೆಟ್ಟ ದೃಶ್ಯಗಳಿಗೆ ರೂಪ ಕೊಡಲಾಗಿದೆ.

ಮಲೆಮಹದೇಶ್ವರರು ನಡುಮಲೆಯಲ್ಲಿ ಧ್ಯಾನಾಸಕ್ತರಾದುದನ್ನು ಚಿತ್ರಿಸಲಾಗಿದೆ.

ವಾಮಾಚಾರದಿಂದ ಜನರಿಗೆ ತೊಂದರೆ ಕೊಡುತ್ತಿದ್ದ ಸೋಲಿಗರ ನೀಲೇಗೌಡ ಮತ್ತು ಸಂಕಮ್ಮನಿಗೆ ಸತ್ಯಶುದ್ಧ ಮಾರ್ಗದ ಬೋಧನೆ ಮಾಡಿದ್ದು ಮೊದಲಾದ ಲೀಲೆಗಳನ್ನು ಮ್ಯೂಸಿಯಂನಲ್ಲಿ ವೀಕ್ಷಿಸಬಹುದಾಗಿದೆ.

ಜಾತ್ರೆ ಸಂಭ್ರಮದ ನೋಟವೂ ಖುಷಿ ಕೊಡುತ್ತದೆ.

ಮಲೆಮಹದೇಶ್ವರರ ಹುಟ್ಟಿನಿಂದ ಹಿಡಿದು ಅಂತ್ಯದವರೆಗೂ ಜೀವನದ ಪ್ರಮುಖ ಘಟ್ಟಗಳನ್ನು ಲೀಲೆಗಳಲ್ಲಿ ಹಿಡಿದಿಡಲಾಗಿದೆ. 20 ಕಾರ್ಮಿಕರು 8 ತಿಂಗಳವರೆಗೆ ಶ್ರಮಿಸಿದ ಪರಿಣಾಮ ಈ ಮ್ಯೂಸಿಯಂ ಸಿದ್ಧಗೊಂಡಿದ್ದು, ದೀಪಗಿರಿಯಒಡ್ಡಿನ ಪ್ರತಿಮೆಯ ಆಕರ್ಷಣೆಯನ್ನು ಇಮ್ಮಡಿಗೊಳಿಸಿದೆ.

ಮ್ಯೂಸಿಯಂ ಉದ್ಘಾಟನೆ ನಂತರ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಬಿಜಿಎಸ್ ಭವನದ ಬಳಿ ಕೌಂಟರ್ ತೆರೆದು, ಅಲ್ಲಿಂದ ಬ್ಯಾಟರಿಚಾಲಿತ ವಾಹನದಲ್ಲಿ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುವುದು
- ಎ.ಇ. ರಘು, ಕಾರ್ಯದರ್ಶಿ, ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.