ಎಚ್.ಡಿ.ಕೋಟೆ: ‘ಪಟ್ಟಣ ವ್ಯಾಪ್ತಿಯಲ್ಲಿ ಈಗಾಗಲೇ ಖರೀದಿಸಲಾಗಿರುವ 6.10 ಎಕರೆ ಜಮೀನಿನಲ್ಲಿ ನಗರ ಯೋಜನಾ ಇಲಾಖೆಯಿಂದ ವಿನ್ಯಾಸನಕ್ಷೆ ಅನುಮೋದನೆ ಪಡೆದು ಬಡ ನಾಗರಿಕರಿಗೆ ನಿವೇಶನಗಳನ್ನು ವಿತರಿಸಲಾಗುವುದು’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಬುಧವಾರ ನಡೆದ ನಗರ ಆಶ್ರಯ ಸಮಿತಿಯ ಪ್ರಥಮ ಸಭೆಯಲ್ಲಿ ಅವರು ಮಾತನಾಡಿದರು.
‘25x30 ಅಡಿಗಳ ಅಳತೆಯ ನಿವೇಶನಗಳನ್ನು ರಚಿಸಿ ಮೂರು ತಿಂಗಳೊಳಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಿವೇಶನ ರಹಿತ ಮತ್ತು ವಸತಿರಹಿತರಿಗೆ ಹಂಚಿಕೆ ಮಾಡಲು ಕ್ರಮ ವಹಿಸಬೇಕು’ ಎಂದರು.
‘ಪಟ್ಟಣದಲ್ಲಿ 23 ವಾರ್ಡ್‌ಗಳಾಗಿದ್ದು, ನಿವೇಶನ ರಹಿತ ಮತ್ತು ವಸತಿರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು, ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಜಮೀನುಗಳನ್ನು ಮಾರಾಟ ಮಾಡಲು ಇಚ್ಛಿಸುವ ಜಮೀನುದಾರರನ್ನು ಗುರುತಿಸಿ, ದಾಖಲಾತಿಗಳನ್ನು ಪಡೆದು ಪರಿಶೀಲಿಸಿ, ಆಶ್ರಯ ಯೋಜನೆಗೆ ಖರೀದಿಸಿಕೊಳ್ಳಲಾಗುವುದು’ ಎಂದು ತಿಳಿಸಿದರು.
‘ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಬೆಂಗಳೂರಿನಿಂದ ಹೆಚ್ಚಿನ ಮನೆಗಳನ್ನು ತಂದು ನಿವೇಶನ ಹೊಂದಿರುವ, ವಸತಿ ರಹಿತರಿಗೆ ಮನೆಗಳನ್ನು ನೀಡಲು ಕ್ರಮ ವಹಿಸಲಾಗುವುದು’ ಎಂದರು.
‘ಪಟ್ಟಣ ವ್ಯಾಪ್ತಿಯಲ್ಲಿ ಸ್ಲಂ ಬೋರ್ಡ್ ನಿಂದ ಗುಂಪು ಮನೆಗಳನ್ನು ನಿರ್ಮಾಣ ಮಾಡಲು ಸೂಚಿಸಲಾಗಿರುತ್ತದೆ’ ಎಂದರು.
ಆಶ್ರಯ ಸಮಿತಿಗೆ ಸರ್ಕಾರದಿಂದ ಹೊಸದಾಗಿ ಆಯ್ಕೆಯಾದ ವಜ್ರೇಗೌಡ, ಕೃಷ್ಣ ನಾಯಕ, ನಜೀರ್ ಅಹಮದ್, ಶಶಿಕಲಾ, ಗೋವಿಂದ್ ರಾಜ್ ಅವರನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ಶ್ರೀನಿವಾಸ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ತಾ.ಪಂ. ಇಒ ಧರಣೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.