ADVERTISEMENT

ಸರ್ಕಾರಕ್ಕೆ ನನ್ನ ಕೈಗಳನ್ನು ಕಟ್ಟಿಹಾಕಲು ಸಾಧ್ಯವಿಲ್ಲ: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 11:38 IST
Last Updated 28 ಜುಲೈ 2020, 11:38 IST
ಎಚ್‌.ವಿಶ್ವನಾಥ್
ಎಚ್‌.ವಿಶ್ವನಾಥ್   

ಮೈಸೂರು: ‘ಸರ್ಕಾರಕ್ಕೆ ನನ್ನ ಕೈಗಳನ್ನು, ಬರವಣಿಗೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ನನ್ನ ಬರವಣಿಗೆ, ಸಾಹಿತ್ಯವನ್ನು ಎಂದೂ ಮಾರಾಟ ಮಾಡಿಲ್ಲ. ಯಾರನ್ನೂ ಬ್ಲಾಕ್‌ಮೇಲ್‌ ಮಾಡಲು ಸಾಹಿತ್ಯವನ್ನು ಬಳಸಿಕೊಂಡಿಲ್ಲ. ಐ ಆ್ಯಮ್‌ ಕ್ಲೀನ್' ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದವರು ನನ್ನ ಆಯ್ಕೆಯನ್ನು ಟೀಕಿಸುತ್ತಾರೆ. ಸಾಹಿತ್ಯದ ಬಗ್ಗೆ ಗೊತ್ತಿರುವವರು ಪುರಸ್ಕಾರ ಮಾಡುತ್ತಾರೆ. ಟೀಕೆ ಮಾಡುವವರು ಯಾವ ಸಾಹಿತ್ಯವನ್ನೂ ಓದಿದವರಲ್ಲ. ಸಾಹಿತ್ಯ ಸಮ್ಮೇಳನಕ್ಕೂ ಹೋದವರಲ್ಲ. ಕೇವಲ ಟೀಕೆ ಮಾಡಬೇಕು ಎಂಬ ಉದ್ದೇಶದಿಂದ ಬೇಕಾಬಿಟ್ಟಿ ಮಾತನಾಡುತ್ತಾರೆ’ ಎಂದು ತಮ್ಮನ್ನು ಟೀಕಿಸಿದ್ದ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಅವರಿಗೆ ತಿರುಗೇಟು ನೀಡಿದರು.

ADVERTISEMENT

‘ಬಾಂಬೆ ಡೇಸ್‌’ ಪುಸ್ತಕದ ಮೂಲಕ ಏನನ್ನೂ ಸಾಬೀತುಪಡಿಸಲು ಹೊರಟಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೆಲ್ಲಾ ನಡೆಯುತ್ತದೆ. ಸರ್ಕಾರದ ಪತನ ಹೇಗೆ ಆಗುತ್ತದೆ ಎಂಬ ವಿವರಗಳನ್ನು ದಾಖಲೆಯ ರೂಪದಲ್ಲಿ ಜನರ ಮುಂದಿಡುವ ಪ್ರಯತ್ನವೇ ಹೊರತು, ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಿದ್ದುಪಡಿ ಅಗತ್ಯವಿರಲಿಲ್ಲ: ಭೂಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಅಗತ್ಯವಿರಲಿಲ್ಲ. ಈ ಬಗ್ಗೆ ಇನ್ನೂ ವಿಸ್ತೃತವಾಗಿ ಚರ್ಚೆಯಾಗಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.