ADVERTISEMENT

16 ಗ್ರಾಮಗಳನ್ನು ಮೈಸೂರು ತಾಲ್ಲೂಕಿಗೆ ಸೇರಿಸಿ: ಬಿ.ಶಿವಣ್ಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 14:26 IST
Last Updated 18 ಅಕ್ಟೋಬರ್ 2020, 14:26 IST

ಮೈಸೂರು: ಮೈಸೂರು ತಾಲ್ಲೂಕಿಗೆ ಹೊಂದಿಕೊಂಡಂತಿದ್ದ 16 ಗ್ರಾಮಗಳನ್ನು ಎಚ್.ಡಿ.ಕೋಟೆ ತಾಲ್ಲೂಕಿಗೆ ಸೇರಿಸಲಾಗಿದೆ. ಇಷ್ಟು ಗ್ರಾಮಗಳನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿ, ಮೈಸೂರು ತಾಲ್ಲೂಕು ಆಡಳಿತಕ್ಕೆ ಒಳಪಡಿಸಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)ಯ ರಾಜ್ಯ ಘಟಕದ ಅಧ್ಯಕ್ಷ ಬಿ.ಶಿವಣ್ಣ ಆಗ್ರಹಿಸಿದರು.

ಇದೀಗ ಎಚ್.ಡಿ.ಕೋಟೆ ತಾಲ್ಲೂಕು ಆಡಳಿತಕ್ಕೆ ಒಳಪಟ್ಟಿರುವ ಬೆಟ್ಟದಬೀಡು, ಕಣಿಯನಹುಂಡಿ, ಜಿ.ಬಿ.ಸರಗೂರು, ಮುದ್ದಯ್ಯನ ಹುಂಡಿ, ಜೊಲ್ಲಯ್ಯನಗುಳ್ಳು, ಗೊಲ್ಲನಬೀಡು, ಕಟ್ಟೇಹುಂಡಿ, ಹಳ್ಳದ ಮನುಗನಹಳ್ಳಿ, ಶಿಂಡೇನಹಳ್ಳಿ, ಆಲನಹಳ್ಳಿ, ಕೃಷ್ಣಯ್ಯನ ಹುಂಡಿ, ಕ್ಯಾತನಹಳ್ಳಿ, ಕೊತ್ತೇಗಾಲ, ಗಂಗಡಹೊಸಹಳ್ಳಿ, ಮಸಣಪುರ ಮತ್ತು ಚಾಮಲಾಪುರ ಗ್ರಾಮಗಳು ಮೈಸೂರಿಗೆ 15ರಿಂದ 20 ಕಿ.ಮೀ. ಅಂತರದಲ್ಲಿವೆ.

ಈ ಗ್ರಾಮಗಳ ಜನರ ವ್ಯಾಪಾರ–ವಹಿವಾಟು, ಇನ್ನಿತರೆ ಚಟುವಟಿಕೆಗಳು ಮೈಸೂರು ನಗರವನ್ನು ಅವಲಂಬಿಸಿದೆ. ಆದರೆ ಜಮೀನು ದಾಖಲೆ, ಆಸ್ತಿಪಾಸ್ತಿ, ಕಂದಾಯ ವಿಚಾರಗಳಿಗೆ 50 ಕಿ.ಮೀ. ದೂರದ ಎಚ್.ಡಿ.ಕೋಟೆಗೆ ತೆರಳಬೇಕಿದೆ. ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ ಎಂದು ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‌ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ನೆರೆ ಹಾವಳಿಗೆ ತಕ್ಷಣವೇ ಸ್ಪಂದಿಸಬೇಕು. ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಇದೇ ಸಂದರ್ಭ ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ಲೋಕೇಶ್, ನಗರ ಘಟಕದ ಅಧ್ಯಕ್ಷ ಎನ್.ಹರೀಶ್, ಜಿಲ್ಲಾ ಸಂಚಾಲಕ ಉಮೇಶ್, ರಾಜ್ಯ ಉಪಾಧ್ಯಕ್ಷ ಯೋಗೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.