ADVERTISEMENT

ಮೈಸೂರು: ‘ಕೊಲೆಯಾಗಿದ್ದ’ ಮಲ್ಲಿಗೆ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 13:52 IST
Last Updated 7 ಏಪ್ರಿಲ್ 2025, 13:52 IST
   

ಮೈಸೂರು: ‘ಕೊಲೆಯಾಗಿದ್ದ’ ಮಹಿಳೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮಲ್ಲಿಗೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿಷ್ಣುವರ್ಧನ್‌ ತಮ್ಮ ಕಚೇರಿಯಲ್ಲಿ ಸೋಮವಾರ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡರು.

ನಾಲ್ಕು ವರ್ಷದ ಹಿಂದೆ ಕಾಣೆಯಾಗಿದ್ದ ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ನಿವಾಸಿ ಮಲ್ಲಿಗೆಯನ್ನು, ಬೆಟ್ಟದಪುರದ ಶ್ಯಾನುಭೋಗನಹಳ್ಳಿಯಲ್ಲಿ ಆಕೆಯ ಪತಿ ಸುರೇಶನೇ ಕೊಲೆ ಮಾಡಿದ್ದಾನೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಂದ ಸ್ವ ಇಚ್ಛಾ ಹೇಳಿಕೆ ಬರೆಸಿಕೊಂಡಿದ್ದರು.

ಆದರೆ ಏ.1ರಂದು ಮಲ್ಲಿಗೆ ತನ್ನ ಪ್ರಿಯತಮ ಗಣೇಶ್‌ ಜೊತೆ ಮಡಿಕೇರಿಯಲ್ಲಿ ಪ‍ತ್ತೆಯಾಗಿದ್ದರು. ಈ ಬಗ್ಗೆ ನ್ಯಾಯಾಲಯವು ಆಕೆಯಿಂದ ಹೇಳಿಕೆ ಪಡೆದು, ಪೊಲೀಸರ ಕರ್ತವ್ಯ ಲೋಪದ ಬಗ್ಗೆ ತರಾಟೆಗೆ ತೆಗೆದುಕೊಂಡಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವಿವರಣೆ ನೀಡುವಂತೆ ಎಸ್‌ಪಿಗೆ ಸೂಚಿಸಿತ್ತು.

ADVERTISEMENT

ಮಲ್ಲಿಗೆಯ ವಿಚಾರಣೆ ನಡೆಸಿದ ಎಸ್‌ಪಿ, ‘ನಿವು ಮನೆಯಿಂದ ಓಡಿ ಹೋಗಲು ಕಾರಣವೇನು, ದಾಂಪತ್ಯದಲ್ಲಿ ಸಮಸ್ಯೆಯಿತ್ತೇ, ನಾಲ್ಕು ವರ್ಷ ಎಲ್ಲಿ ವಾಸ ಇದ್ದೀರಿ, ಪ್ರಕರಣದಲ್ಲಿ ಪತಿ ಆರೋಪಿಯಾಗಿರುವ ಬಗ್ಗೆ ತಿಳಿದಿರಲಿಲ್ಲವೇ’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.

‘ತನ್ನ ಹತ್ತಿರದ ಸಂಬಂಧಿಯಾದ ಗಣೇಶ್‌ ಮತ್ತು ನಾನು ಪ್ರೀತಿಸುತ್ತಿದ್ದೆವು. ಹೀಗಾಗಿ ಆತನೊಂದಿಗೆ ತೆರಳಿದ್ದೆ. ಮಡಿಕೇರಿಯಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಶೆಟ್ಟಿಹಳ್ಳಿಯಲ್ಲಿ ವಾಸವಿದ್ದೆವು’ ಎಂದು ಮಲ್ಲಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೈಲುವಾಸ ಅನುಭವಿಸಿದ ಆದಿವಾಸಿ ಸಮುದಾಯದ ಸುರೇಶ್‌ ಹಾಗೂ ಆತನ ಕುಟುಂಬದ ವಿಚಾರಣೆಯು ಮಂಗಳವಾರ ನಡೆಯಲಿದೆ. ಇಲ್ಲಿ ಆತನ ಇಬ್ಬರು ಮಕ್ಕಳು ಹಾಗೂ ಮಲ್ಲಿಗೆಯ ತಾಯಿಯ ಹೇಳಿಕೆಗಳು ಮಹತ್ವ ಪಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.