ADVERTISEMENT

‘ಕೊಲೆಯಾಗಿದ್ದ’ ಮಹಿಳೆ ಪತ್ತೆ ಪ್ರಕರಣ: ನಿರಪರಾಧಿಯಾಗಿ ಬಿಡುಗಡೆಗೊಂಡ ಸುರೇಶ್‌

‘ಕೊಲೆಯಾಗಿದ್ದ’ ಮಹಿಳೆ ಪತ್ತೆ ಪ್ರಕರಣ: ತನಿಖಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 14:40 IST
Last Updated 23 ಏಪ್ರಿಲ್ 2025, 14:40 IST
ಸುರೇಶ್‌
ಸುರೇಶ್‌   

ಮೈಸೂರು: ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಶಿಕ್ಷೆ ವಿಧಿಸಿದ್ದ ನ್ಯಾಯಾಲಯವೇ, ‘ಪೊಲೀಸರು ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ, ಆತ ತಪ್ಪು ಮಾಡಿಲ್ಲ’ ಎಂದು ಸ್ಪಷ್ಟಪಡಿಸಿ ನಿರಪರಾಧಿ ಎಂದು ಬುಧವಾರ ಘೋಷಿಸಿತು.

ಪತ್ನಿ ಮಲ್ಲಿಗೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲುವಾಸ ಅನುಭವಿಸಿದ್ದ ಕುಶಾಲನಗರದ ಬಸವನಹಳ್ಳಿ ನಿವಾಸಿ ಸುರೇಶ್‌ ಅವರನ್ನು ಇಲ್ಲಿನ 5ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯವು ನಿರಪರಾಧಿ ಎಂದು ಘೋಷಿಸುತ್ತಿದ್ದಂತೆ ಅವರ ಕುಟುಂಬ ಕಣ್ಣೀರಾಯಿತು.

ಪ್ರಕರಣ ಸಂಬಂಧ, ಪೊಲೀಸ್‌ ದಾಖಲೆಗಳಲ್ಲಿ ಆತನ ಹೆಸರನ್ನು ತೆಗೆದು ಹಾಕುವಂತೆ ಬೆಟ್ಟದಪುರ ಪೊಲೀಸರಿಗೆ ನ್ಯಾಯಾಧೀಶ ಗುರುರಾಜ್‌ ಸೋಮಕ್ಕಳವರ್‌ ಸೂಚನೆ ನೀಡಿದರು. ‘ಆರೋಪಿಯ ಜಾಮೀನು ಬಾಂಡ್‌ ಮತ್ತು ಅವರ ಶ್ಯೂರಿಟಿ ಬಾಂಡ್‌ ಅನ್ನು ರದ್ದುಗೊಳಿಸಲಾಗಿದೆ. ಅವರಿಗೆ ₹1 ಲಕ್ಷ ಪರಿಹಾರ ನೀಡುವಂತೆ ಸರ್ಕಾರದ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ’ ಎಂದು ಆದೇಶಿಸಿದರು.

ADVERTISEMENT

ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಬೈಲಕುಪ್ಪೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಬಿ.ಜಿ.ಪ್ರಕಾಶ್ ವಿರುದ್ಧ ಐಪಿಸಿ ಸೆಕ್ಷನ್‌ 193, 195 ರ ಅಡಿ (ಸುಳ್ಳು ಪ್ರಕರಣ ಸೃಷ್ಟಿ, ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಕೆ) ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗೆ ಸೂಚಿಸಿದರು.

‘ಪ್ರಕರಣದ ತನಿಖಾ ತಂಡದಲ್ಲಿದ್ದ ಅಂದಿನ ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಜಿತೇಂದ್ರ ಕುಮಾರ್‌, ಬೆಟ್ಟದಪುರ ಪಿಎಸ್‌ಐ ಮಹೇಶ್ ಕುಮಾರ್, ಎಸ್‌ಐ ಪ್ರಕಾಶ್ ಯತ್ತಿಮನಿ ವಿರುದ್ಧ ಇಲಾಖಾ ತನಿಖೆ ನಡೆಸಬೇಕು’ ಎಂದು ಮೈಸೂರು ಐಜಿಪಿಗೆ, ‘ಪ್ರಸ್ತುತ ಪ್ರಕರಣದಲ್ಲಿ ದಾಖಲಾದ ಯುಡಿಆರ್‌ ಕುರಿತು ತನಿಖೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದರು.

ಘಟನೆಯ ಹಿನ್ನೆಲೆ: ನಾಲ್ಕು ವರ್ಷದ ಹಿಂದೆ, ಬೆಟ್ಟದಪುರದ ಶಾನುಭೋಗನಹಳ್ಳಿಯಲ್ಲಿ ದೊರಕಿದ್ದ ಶವವನ್ನು, ಕುಶಾಲನಗರದ ಮಹಿಳೆ ಮಲ್ಲಿಗೆಯವರದ್ದು ಎಂದು ಬಿಂಬಿಸಿ ಮಲ್ಲಿಗೆಯನ್ನು ಆಕೆಯ ಗಂಡ ಸುರೇಶ್‌ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಬೆಟ್ಟದಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರು ಜಾಮೀನಿನ ಮೂಲಕ ಬಿಡುಗಡೆಗೊಂಡಿದ್ದರು.

ಏ.1ರಂದು ಮಲ್ಲಿಗೆಯು ತನ್ನ ಪ್ರಿಯತಮ ಗಣೇಶ್‌ನೊಂದಿಗೆ ಪತ್ತೆಯಾದ ಬಳಿಕ ಪ್ರಕರಣ ತಿರುವು ಪಡೆದುಕೊಂಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಪೊಲೀಸ್‌ ತನಿಖಾಧಿಕಾರಿಗಳ ಕರ್ತವ್ಯ ಲೋಪವನ್ನು ಎತ್ತಿಹಿಡಿದು, ಬುಧವಾರ (ಏ.23)ಕ್ಕೆ ಆದೇಶ ಕಾಯ್ದಿರಿಸಿತ್ತು. ಆದೇಶದ ಬಗ್ಗೆ ತೀವ್ರ ಕುತೂಹಲ ಮೂಡಿದ್ದರಿಂದ ನ್ಯಾಯಾಲಯದಲ್ಲಿ ಎಂದಿಗಿಂತ ಹೆಚ್ಚು ಜನ ಸೇರಿದ್ದರು.

ಶುಲ್ಕ ಪಡೆಯದೆ ವಾದ ಮಂಡಿಸಿದ ವಕೀಲರು

ಸುರೇಶ್‌ ಜೈಲಿನಲ್ಲಿದ್ದ ಸಮಯದಲ್ಲಿ ಆತನ ತಂದೆ ಗಾಂಧಿ ಅವರು ವಕೀಲ ಪಾಂಡು ಪೂಜಾರಿ ಅವರನ್ನು ಭೇಟಿಯಾಗಿ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಮಗನನ್ನು ಜೈಲಿಗೆ ಹಾಕಿರುವ ಬಗ್ಗೆ ತಿಳಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪಾಂಡು ಪೂಜಾರಿ ಇಲ್ಲಿಯವರೆಗೆ ಸುರೇಶ್‌ ಕುಟುಂಬದಿಂದ ಯಾವುದೇ ಶುಲ್ಕ ಪಡೆಯದೆ ವಾದ ಮಂಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಅಮಾಯಕರನ್ನು ಬಲಾಢ್ಯರು ಹೇಗೆ ತುಳಿಯುತ್ತಾರೆ ಎಂಬುದಕ್ಕೆ ಇದು ಉದಾಹರಣೆ. ಆದಿವಾಸಿ ಸಮುದಾಯದ ಸುರೇಶ್‌ ಆರ್ಥಿಕವಾಗಿ ದುರ್ಬಲರಾಗಿದ್ದರಿಂದ ನೆರವಾಗಿರುವೆ. ನ್ಯಾಯಾಲಯವನ್ನು ನಂಬಿದರೆ ನ್ಯಾಯ ದೊರೆಯುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ’ ಎಂದರು.

‘ಪಾಂಡು ಪೂಜಾರಿ ದೇವರಂತೆ ಬಂದು ನನ್ನನ್ನು ಕಾಪಾಡಿದ್ದಾರೆ. ಕಾನೂನಿನ ಅರಿವಿಲ್ಲದ ನನ್ನನ್ನು ದೊಡ್ಡ ತೊಂದರೆಯಿಂದ ಹೊರತಂದಿದ್ದಾರೆ’ ಎಂದು ಸುರೇಶ್‌ ಕೃತಜ್ಞತೆ ವ್ಯಕ್ತಪಡಿಸಿದರು.

ನ್ಯಾಯಾಲಯದ ಆದೇಶದ ಬಗ್ಗೆ ಅಸಮಾಧಾನವಿದ್ದು ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ. ಕುಶಾಲನಗರ ಠಾಣೆಯವರನ್ನೂ ಸೇರಿಸಿ ತನಿಖೆಯಲ್ಲಿ ಭಾಗಿಯಾಗಿ ಸುಳ್ಳು ಪ್ರಕರಣ ದಾಖಲಿಸಿದ ಅಧಿಕಾರಿಗಳೆಲ್ಲರಿಗೂ ಶಿಕ್ಷೆಯಾಗಬೇಕು. ಕಕ್ಷಿದಾರನಿಗೆ ಹೆಚ್ಚಿನ ಪರಿಹಾರ ದೊರೆಯಬೇಕು
ಪಾಂಡು ಪೂಜಾರಿ, ಸುರೇಶ್‌ ಪರ ವಕೀಲ
ಆರೋಪ ಸಾಬೀತುಪಡಿಸದಿದ್ದರೆ ನ್ಯಾಯಾಲಯವು ಸಾಮಾನ್ಯವಾಗಿ ಆರೋಪಿಯನ್ನು ಬಿಡುಗಡೆ ಮಾಡುತ್ತದೆ. ಆದರೆ ಈ ಪ್ರಕರಣದಲ್ಲಿ ಸುರೇಶ್‌ ನಿರಪರಾಧಿಯಾಗಿ ಬಿಡುಗಡೆಯಾಗಿರುವುದು ವಿಶೇಷ. ಕೆಲವೇ ಪ್ರಕರಣದಲ್ಲಿ ಈ ರೀತಿಯ ಆದೇಶ ಬಂದಿದೆ.
ಪಿ.ಜೆ.ರಾಘವೇಂದ್ರ, ವಕೀಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.