ADVERTISEMENT

ಮೈಸೂರು: ‘ಅಮೃತ ಭಾರತಿಗೆ ಕನ್ನಡದಾರತಿ’ ಸಂಭ್ರಮ

ಗಮನಸೆಳೆದ ಮೆರವಣಿಗೆ, ವಿದ್ಯಾರ್ಥಿ–ವಿದ್ಯಾರ್ಥಿನಿಯರು ಭಾಗಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 13:28 IST
Last Updated 25 ಜೂನ್ 2022, 13:28 IST
ಸುಬ್ಬರಾಯನಕೆರೆ ಮೈದಾನದಲ್ಲಿ ಶನಿವಾರ ನಡೆದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸಂಸದ ಪ್ರತಾಪ ಸಿಂಹ ಸನ್ಮಾನಿಸಿದರು/ ಪ್ರಜಾವಾಣಿ ಚಿತ್ರ
ಸುಬ್ಬರಾಯನಕೆರೆ ಮೈದಾನದಲ್ಲಿ ಶನಿವಾರ ನಡೆದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸಂಸದ ಪ್ರತಾಪ ಸಿಂಹ ಸನ್ಮಾನಿಸಿದರು/ ಪ್ರಜಾವಾಣಿ ಚಿತ್ರ   

ಮೈಸೂರು: 250 ಅಡಿ ಉದ್ದದ ತ್ರಿವರ್ಣ ಧ್ವಜದೊಂದಿಗೆ ಸಾಗಿ ಸಾರ್ವಜನಿಕರಲ್ಲಿ ದೇಶಭಕ್ತಿ ಉದ್ದೀಪಿಸಿದ ವಿದ್ಯಾರ್ಥಿನಿಯರು. ಸ್ವಾತಂತ್ರ್ಯ ಸೇನಾನಿಗಳ ವೇಷಭೂಷಣದಲ್ಲಿ ಕಂಗೊಳಿಸಿದ ಚಿಣ್ಣರು. ಕುಂಭಗಳನ್ನು ಹೊತ್ತು ಪಾಲ್ಗೊಂಡ ಅಂಗನವಾಡಿ ಕಾರ್ಯಕರ್ತೆಯರು. ರಸ್ತೆಯುದ್ದಕ್ಕೂ ನರ್ತಿಸಿದ ನೃತ್ಯ‍ಪಟುಗಳು. ಜಾನಪದ ಕಲಾ ತಂಡಗಳ ಮೆರುಗು.

– ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಾಮಸ್ವಾಮಿ ವೃತ್ತದಿಂದ ಸುಬ್ಬರಾಯನಕೆರೆವರೆಗೆ ಶನಿವಾರ ಹಮ್ಮಿಕೊಂಡಿದ್ದ ಮೆರವಣಿಗೆಯ ಝಲಕ್ ಇದು. ಇದರೊಂದಿಗೆ ‘ಅಮೃತ ಭಾರತಿಗೆ ಕನ್ನಡದಾರತಿ’ಯನ್ನು ಸಂಭ್ರಮ–ಸಡಗರದಿಂದ ನೆರವೇರಿಸಲಾಯಿತು.

ವಿವಿಧೆಡೆಯಿಂದ ಬಂದು ರಾಮಸ್ವಾಮಿ ವೃತ್ತದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿ–ವಿದ್ಯಾರ್ಥಿನಿಯರು,ಭಾರತಾಂಬೆಯ ಚಿತ್ರದ ಮೆರವಣಿಗೆಯ ಮೆರುಗು ಹೆಚ್ಚಿಸಿದರು.

ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ–ಬಲಿದಾನ ಸ್ಮರಿಸಲಾಯಿತು. ಅವರ ಸ್ಮರಣಾರ್ಥ ರಾಮಸ್ವಾಮಿ ವೃತ್ತ ಹಾಗೂ ಸುಬ್ಬರಾಯನಕೆರೆ ಆವರಣದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಶಿಲಾಫಲಕ ಅನಾವರಣಗೊಳಿಸಲಾಯಿತು.

ವಿವಿಧ ನೃತ್ಯಶಾಲೆಗಳ ವಿದ್ಯಾರ್ಥಿನಿಯರು ಶಿಕ್ಷಕರೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮೊಬೈಲ್‌ ಫೋನ್‌ಗಳಲ್ಲಿ ಸೆಲ್ಫಿ ತೆಗೆದುಕೊಂಡು, ಫೋಟೊ ತೆಗೆಸಿಕೊಂಡು ಖುಷಿಪಟ್ಟರು. ಮುದ್ದು ಮಕ್ಕಳು ತಮ್ಮ ವೇಷಭೂಷಣದ ಮೂಲಕ ಸ್ವಾತಂತ್ರ್ಯವೀರರ ನೆನಪುಗಳನ್ನು ತಂದರು.

ಹೋರಾಟಗಾರರನ್ನು ಸ್ಮರಿಸಬೇಕು
ನಂತರ ಸುಬ್ಬರಾಯನಕೆರೆ ಆವರಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಪ್ರತಾಪ ಸಿಂಹ, ‘ಲಕ್ಷಾಂತರ ಹೋರಾಟಗಾರರ ತ್ಯಾಗ ಬಲಿದಾನದ ಪರಿಣಾಮವಾಗಿ ನಾವು ಹಕ್ಕುಗಳನ್ನು ಪಡೆಯುತ್ತಿದ್ದೇವೆ. ಆ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪಠ್ಯಪುಸ್ತಕದಲ್ಲಿ ಓದುವ ಜೊತೆಗೆ ಅವರನ್ನು ನಿತ್ಯವೂ ಸ್ಮರಿಸಬೇಕು’ ಎಂದು ತಿಳಿಸಿದರು.

‘75ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದರು.

ಮೆರವಣಿಗೆಯಲ್ಲಿದ್ದಷ್ಟು ವಿದ್ಯಾರ್ಥಿಗಳು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ, ‘ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು. ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುವ ಸಮಾರಂಭಕ್ಕೆ ಪ್ರೇಕ್ಷಕರ ಕೊರತೆ ಕಾಡಬಾರದು’ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ವಿಧಾನಪರಿಷತ್ ಸದಸ್ಯ ಕೆ.ಎಸ್. ಕೇಶವಪ್ರಸಾದ್, ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊಘಲರ ವಿರುದ್ಧ ಹೋರಾಡಿದ ಭಾರತೀಯರು ನಾವೆಲ್ಲರೂ ಒಂದೆಂದು ತೋರಿಸಿಕೊಟ್ಟರು. ಅಂಬೇಡ್ಕರ್ ದಲಿತರು, ಶೋಷಿತರು, ಹಿಂದುಳಿದ ವರ್ಗಗಳಲ್ಲಿಯೂ ಸ್ವಾತಂತ್ರ್ಯದ ಅರಿವು ಮೂಡಿಸಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನದಟ್ಟು ಮಾಡಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಜೈಲು ಸೇರಿದ್ದ ಪ್ರಥಮ ಮಹಿಳೆ ಸುಬ್ಬಮ್ಮ. ಅವರು ಒಂದು ವರ್ಷದ ಮಗುವಿನ ಜೊತೆಗೆ ಜೈಲು ಸೇರಿದ್ದರು’ ಎಂದು ಸ್ಮರಿಸಿದರು.

ವಿವಿಧ ನೃತ್ಯಶಾಲೆಗಳಿಗೆ:ಮೆರವಣಿಗೆಯಲ್ಲಿ ಪಾಲ್ಗೊಂಡ ಗುರುದೇವ ಅಕಾಡೆಮಿ, ನೃತ್ಯಾಲಯ ಟ್ರಸ್ಟ್, ಲಾಸ್ಯ ರಂಜನ ನೃತ್ಯಶಾಲೆ, ರಂಗ ಲಕ್ಷಣಂ ಪ್ರತಿಷ್ಠಾನ, ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ, ಚಂಪಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ನೃತ್ಯಾನಿಕೇತನ ನೃತ್ಯ ಶಾಲೆಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಸ್ವಾತಂತ್ರ್ಯ ಹೋರಾಟಗಾರರಾದ ರೇವಣ್ಣ, ರಂಗ ಶೆಟ್ಟಿ ಮತ್ತು ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ಎಂ.ವಿ. ಫಣೀಶ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎಂ.ಆರ್. ಕೃಷ್ಣಪ್ಪಗೌಡ, ಕಾಂ‍ಪೋಸ್ಟ್ ನಿಗಮದ ಅಧ್ಯಕ್ಷ ಎಸ್. ಮಹದೇವಯ್ಯ, ನಗರಪಾಲಿಕೆ ‌ಸದಸ್ಯರಾದ ಪ್ರಮೀಳಾ ಭರತ್, ಆಶಾ ನಾಗಭೂಷಣಸ್ವಾಮಿ,ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಮಂಜುನಾಥಸ್ವಾಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಪಾಲ್ಗೊಂಡಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ‌.ಡಿ. ಸುದರ್ಶನ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.