ADVERTISEMENT

ಹೆಚ್ಚುವರಿಯಾಗಿ 13 ವೃತ್ತ, 10 ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 15:50 IST
Last Updated 29 ಸೆಪ್ಟೆಂಬರ್ 2022, 15:50 IST
   

ಮೈಸೂರು: ‘ದಸರಾ ಅಂಗವಾಗಿ ಹೆಚ್ಚುವರಿಯಾಗಿ 13 ವೃತ್ತ ಹಾಗೂ 10 ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ’ ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕರ ಸಲಹೆ ಆಧರಿಸಿ ಸುಧಾರಣೆ ಮಾಡಲಾಗಿದೆ’ ಎಂದು ಹೇಳಿದರು.

‘ಈ ಬಾರಿ 124 ಕಿ.ಮೀ. ಉದ್ದದ ರಸ್ತೆಗಳು, 96 ವೃತ್ತಗಳಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಇದರೊಂದಿಗೆ ಹೆಚ್ಚುವರಿ ರಸ್ತೆ, ವೃತ್ತಗಳನ್ನು ಸೇರಿಸಲಾಗಿದೆ. 42 ಕಿ.ಮೀ. ವ್ಯಾಪ್ತಿಯ ಹೊರವರ್ತುಲ ರಸ್ತೆಯ ಪ್ರಮುಖ ಜಂಕ್ಷನ್‌ಗಳನ್ನೂ ಅಲಂಕರಿಸಲಾಗಿದೆ’ ಎಂದರು.

ADVERTISEMENT

‘ಸೆ.23ರಿಂದ ಅ.8ರವರೆಗೆ ದೀಪಾಲಂಕಾರ ಇರಲಿದೆ. ಇದಕ್ಕೆ₹ 5.2 ಕೋಟಿ ವೆಚ್ಚವಾಗಲಿದೆ. ಇದರಲ್ಲಿ ₹40 ಲಕ್ಷ ಮಾತ್ರ ಪ್ರಾಯೋಜಕತ್ವದಿಂದ ಬಂದಿದೆ’ ಎಂದು ಸ್ಪಷ್ಟಪಡಿಸಿದರು.

‘ಚಾಮರಾಜ, ಕೃಷ್ಣರಾಜ, ಜಯಚಾಮರಾಜೇಂದ್ರ, ಬಸವೇಶ್ವರ, ಗಾಂಧಿ, ಅಂಬೇಡ್ಕರ್, ಮುಡಾ, ಬಾಬು ಜಗಜೀವನ್‌ರಾಂ, ರಾಮಸ್ವಾಮಿ ವೃತ್ತ, ಆಯುರ್ವೇದ ಆಸ್ಪತ್ರೆ, ಅಗ್ರಹಾರ ಮೊದಲಾದ ಪ್ರಮುಖ ವೃತ್ತಗಳು ವಿಶೇಷವಾಗಿ ಕಂಗೊಳಿಸುತ್ತಿವೆ. ಕೆಲವೆಡೆ ಬದಲಾವಣೆ ಮಾಡಿ ಮತ್ತಷ್ಟು ಆಕರ್ಷಕಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಚಾಮುಂಡಿ ಬೆಟ್ಟದಲ್ಲಿ ಈಚೆಗೆ 160 ವಿದ್ಯುತ್ ಕಂಬ ಅಳವಡಿಸಲಾಗಿದೆ. ಬೆಟ್ಟದಲ್ಲೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ’ ಎಂದರು.

ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷ ಟಿ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.