ADVERTISEMENT

ಉಳಿದ ‘ಅಯ್ಯಜ್ಜಯ್ಯನಹುಂಡಿ ಕೆರೆ’

ಜಿಲ್ಲಾಡಳಿತದಿಂದ ಬೇಕಿದೆ ಇನ್ನಷ್ಟು ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 31 ಮೇ 2025, 6:37 IST
Last Updated 31 ಮೇ 2025, 6:37 IST
ಮೈಸೂರಿನ ಅಯ್ಯಜ್ಜಯ್ಯನಹುಂಡಿ ಕೆರೆಯ ನೋಟ – ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.
ಮೈಸೂರಿನ ಅಯ್ಯಜ್ಜಯ್ಯನಹುಂಡಿ ಕೆರೆಯ ನೋಟ – ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.   

ಮೈಸೂರು: ಮೂರ್ನಾಲ್ಕು ವರ್ಷದ ಹಿಂದೆ ಬಹುತೇಕ ಮುಚ್ಚಿಹೋಗಿದ್ದ ಅಯ್ಯಜ್ಜಯ್ಯನಹುಂಡಿ ಕೆರೆ ಈಗ ನಳನಳಿಸುತ್ತಿದೆ. ಜೀವವೈವಿಧ್ಯ ಮರಳಿದೆ. ಆದರೆ, ಇನ್ನಷ್ಟು ಕಾಯಕಲ್ಪಕ್ಕೆ ಕಾಯುತ್ತಿದೆ.

ರಿಂಗ್‌ ರಸ್ತೆಯ ಪಕ್ಕದಲ್ಲಿರುವ, ಲಿಂಗಾಂಬುಧಿ ಪಾಳ್ಯಕ್ಕೆ ಸಮೀಪದ ಕೆರೆಯು 10 ಎಕರೆ ವಿಸ್ತಾರವಾಗಿ ಹರಡಿದ್ದು, ದಶಕದ ಹಿಂದೆ ಬಂದ ರಸ್ತೆಯು ಸೀಳಿತು. ಸರ್ವೆ ಸಂಖ್ಯೆ 17 ಹಾಗೂ 58ರಲ್ಲಿರುವ ಕೆರೆಯನ್ನು ರಿಂಗ್‌ ರಸ್ತೆಯು ಎರಡು ಭಾಗ ಮಾಡಿದೆ. ಸರ್ವೆ ನಂ.58ರಲ್ಲಿನ ಕೆರೆ ಭಾಗವನ್ನು ಕೇರ್ಗಳ್ಳಿ ಕೆರೆಯೆಂದೂ ಕರೆಯಲಾಗುತ್ತದೆ. ಮುಡಾ ಇದನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ದಿಶಾಂಕ್ ಆ್ಯಪ್‌ನಲ್ಲಿ ತೋರುತ್ತದೆ. ಎರಡೂ ಸರ್ವೆ ಸಂಖ್ಯೆಗಳಿಂದ ಕೆರೆಯ ವಿಸ್ತೀರ್ಣ 19 ಎಕರೆ. 58ರಲ್ಲಿನ ಜಾಗದಲ್ಲಿ ಒತ್ತುವರಿ ಕಾರ್ಯ ನಡೆದಿದ್ದು, ಅದನ್ನು ಜಿಲ್ಲಾಡಳಿತವು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ.

ಸರ್ವೆ ಸಂಖ್ಯೆ 17ರಲ್ಲಿದ್ದ ಕಟ್ಟಡ ತ್ಯಾಜ್ಯವನ್ನು ನಾಲ್ಕು ವರ್ಷದ ಹಿಂದೆ ತೆರವುಗೊಳಿಸಿ ಉಳಿಸಿಕೊಂಡಿತು. ಈಗಲೂ ಕೆರೆಯ ಉತ್ತರ ಭಾಗದಲ್ಲಿ ಸುರಿಯುತ್ತಿರುವುದು ಮುಂದುವರಿದಿದೆ. ಜೆಸಿಬಿಯಿಂದ ಮಟ್ಟಗೊಳಿಸುವ ಕಾರ್ಯ ನಡೆದಿದೆ. ಬಡಾವಣೆಗಳು ನಿರ್ಮಾಣಗೊಂಡಿದ್ದು, ಒಳಚರಂಡಿ ನೀರು ಸೇರುತ್ತಿದೆ. ‘ಸಾತಿ ಕೆರೆ’, ‘ತಿಪ್ಪಯ್ಯನ ಕೆರೆ’ಯಂತೆ ಚರಂಡಿ ನೀರಿನ ತೊಟ್ಟಿಯಂತಾಗದಿರಲು ಆಡಳಿತ ವ್ಯವಸ್ಥೆ ಈಗಲೇ ಎಚ್ಚರ ವಹಿಸಬೇಕಿದೆ ಎನ್ನುವುದು ಪರಿಸರ ಪ್ರೇಮಿಗಳ ಆಶಯ.

ADVERTISEMENT

ಕೆರೆಗೆ ಮರುಜೀವ: ರಿಂಗ್‌ ರಸ್ತೆಯಲ್ಲಿ ವಾಕಿಂಗ್ ಮಾಡುವವರು ಬೆಳಿಗ್ಗೆ ತ್ಯಾಜ್ಯವನ್ನು ಪೊಟ್ಟಣಗಳಲ್ಲಿ ಬಿಸಾಡುವುದು ಮುಂದುವರಿದಿದೆ. ಇದನ್ನು ತಪ್ಪಿಸಲೆಂದೇ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ತಡೆಬೇಲಿ ನಿರ್ಮಿಸಿತ್ತು. ಜಿಲ್ಲಾಡಳಿತ ಕ್ರಮವಹಿಸಿದ್ದರಿಂದ ಕೆರೆಗೆ ಮರುಜೀವ ಬಂದಿದ್ದು, ಪಕ್ಷಿಗಳ ಹಾಜರಿ ಕಾಣಬಹುದು.

ನಡಿಗೆ ಪಥವು ಬಳಕೆಯಾಗದೆ ಕಳೆಗಿಡಗಳು ತುಂಬಿಕೊಂಡಿವೆ. ತ್ಯಾಜ್ಯ ನೀರು ಸೇರದಂತೆ ತಡೆಯಲು ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಿಸಬೇಕಿದೆ. ಕೆರೆ ಪರಿಸರ ಉಳಿಸಿಕೊಳ್ಳಬೇಕಿದೆ.     

ಪುಟ್ಟ ಕೆರೆಗಳನ್ನು ಉಳಿಸಿಕೊಳ್ಳಬೇಕು: ‘ಮೈಸೂರು ಸುತ್ತಮುತ್ತಲಿದ್ದ 106 ಕೆರೆ–ಕಟ್ಟೆ–ಕುಂಟೆಗಳಲ್ಲಿ ಈಗಾಗಲೇ 37 ಮಾಯವಾಗಿವೆ. 69 ಜಲಮೂಲಗಳಷ್ಟೇ ಉಳಿದಿವೆ. ನಗರ ಹಾಗೂ ಸುತ್ತಮುತ್ತ 28 ಕೆರೆ, 31 ಕಟ್ಟೆ, 14 ಕುಂಟೆಗಳಿವೆ. ಅಯ್ಯಜ್ಜಯ್ಯನಹುಂಡಿ ಚಿಕ್ಕ ಕೆರೆಯು ಮುಚ್ಚಿಹೋಗುತ್ತಿತ್ತು. ಅದನ್ನು ಪುನರುಜ್ಜೀವನಗೊಳಿಸಿದ್ದು, ಮತ್ತಷ್ಟು ಕಾಯಕಲ್ಪ ನೀಡುವುದು ಅಗತ್ಯ. ರಸ್ತೆಯ ಪಕ್ಕದಲ್ಲಿನ ಕೇರ್ಗಳ್ಳಿ ಕೆರೆಯನ್ನೂ ಉಳಿಸಿಕೊಳ್ಳಬೇಕು’  ಎಂದು ಪರಿಸರ ತಜ್ಞ ಯು.ಎನ್.ರವಿಕುಮಾರ್ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಪುಟ್ಟ ಕೆರೆಗಳು ತೀವ್ರ ಅಪಾಯದಲ್ಲಿವೆ. ರಿಂಗ್‌ ರಸ್ತೆಯ ಹೊಂದಿಕೊಂಡಂತಿದ್ದ ಹಳ್ಳ, ಜೌಗುಗಳಲ್ಲಿ ಚರಂಡಿ ನೀರು ಹಾಗೂ ಕಟ್ಟಡ ತ್ಯಾಜ್ಯ ತುಂಬಲಾಗುತ್ತಿದ್ದು, ಈ ಕೆರೆಗಳನ್ನು ಕಾಪಾಡಲು ತೀವ್ರ ಕಾಳಜಿಯನ್ನು ನಾಗರಿಕರು ಹಾಗೂ ಆಡಳಿತ ವ್ಯವಸ್ಥೆ ವಹಿಸಬೇಕು. ಅದನ್ನು ಮುಂದಿನ ಪೀಳಿಗೆಗೂ ಉಳಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.